ಬೌರಿಂಗ್ ಆಸ್ಪತ್ರೆ 7 ಮಂದಿ ದುರಂತ ಸಾವು – ಗುತ್ತಿಗೆದಾರ ಕಂಪನಿ ಮೇಲೆ ಮತ್ತೊಂದು ವಿರುದ್ಧ FIR
one more FIR on contract company on bowring hospital death disaster 7 people death

ಬೆಂಗಳೂರು: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿದು 7 ಜನರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರ ಕಂಪನಿ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ (FIR) ದಾಖಲಿಸಲಾಗಿದೆ. ಸಮಗ್ರ ತ್ಯಾಜ್ಯ ವಿಲೇವಾರಿ ಮಾಡದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ನಿರ್ದೇಶನದಂತೆ ಕೇಸು ದಾಖಲಾಗಿದೆ.

ಆರೋಗ್ಯ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ದೂರಿನ ಅನ್ವಯ ಎಫ್‌ಐಆರ್ ದಾಖಲಾಗಿದೆ. ಚೆನ್ನೈ ಮೂಲದ ಎಎಸ್‌ಆರ್ ಟ್ರೇಡರ್ಸ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆಗೆ ತಾಂತ್ರಿಕ ಸಮಿತಿ ರಚನೆ ಮಾಡಲಾಗಿತ್ತು. ಬೌರಿಂಗ್ ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣಕ್ಕಾಗಿ ಹಳೆ ಕಟ್ಟಡ ತೆರವುಗೊಳಿಸಲು ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆ ವಹಿಸಲಾದ ಎಎಸ್‌ಆರ್ ಟ್ರೇಡರ್ಸ್ ಕಂಪನಿ ನಿರ್ಲಕ್ಷ್ಯ ವಹಿಸಿದ್ದು, ಕಟ್ಟಡ ನೆಲಸಮ ಮಾಡಿದ ತ್ಯಾಜ್ಯ ವಿಲೇವರಿ ಮಾಡದೆ ಅಲ್ಲಿ ಬಿಟ್ಟು ಹೋಗಿದ್ದು ದುರಂತಕ್ಕೆ ಕಾರಣ ಎಂದು ಹೇಳಲಾಗಿದೆ.
ನೋಟಿಸ್‌ಗೆ ಕ್ಯಾರೆ ಎಂದ ಗುತ್ತಿಗೆದಾರ ಕಂಪನಿ!
ಇನ್ನು ತ್ಯಾಜ್ಯ ತೆರವುಗೊಳಿಸದ ಹಾಗೂ ನಿಯಮ ಉಲ್ಲಂಘಿಸಿದ ಕುರಿತು ಸ್ಪಷ್ಟೀಕರಣ ನೀಡುವಂತೆ ಸರ್ಕಾರದ ವತಿಯಿಂದ ಎಎಸ್‌ಆರ್ ಟ್ರೇಡರ್ಸ್ ಕಂಪನಿಯ ಇಮೇಲ್ ಐಡಿಗೆ ನೋಟಿಸ್ ಕಳುಹಿಸಲಾಗಿತ್ತು. ಮೇ 18ರ ಒಳಗಾಗಿ ಲಿಖಿತ ಸ್ಪಷ್ಟೀಕರಣ ನೀಡಬೇಕೆಂದು ಎಕ್ಸಿಕ್ಯೂಟಿವ್ ಇಂಜಿನಿಯರ್ ಚಂದ್ರು ಗಡುವು ನೀಡಿದ್ದರೂ ಗುತ್ತಿಗೆದಾರ ಕಂಪನಿ ಇಮೇಲ್‌ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನಿರ್ದೇಶನ ಮೇರೆಗೆ ದೂರು ದಾಖಲಿಸಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಕಂಪನಿಗೆ ನೋಟಿಸ್ ನೀಡಿದ್ದಾರೆ.
ದುರಂತದ ಹಿನ್ನೆಲೆ: ಏಪ್ರಿಲ್ 29ರಂದು ಭಾರಿ ಬಿರುಗಾಳಿ ಮಳೆಗೆ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು 7 ಜೀವಗಳು ಬಲಿಯಾಗಿದ್ದವು. ಕಾಂಪೌಂಡ್ ಬಳಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ 5 ಮಂದಿ ಹಾಗೂ 2 ಪಾದಾಚಾರಿಗಳು ಸೇರಿದಂತೆ ಒಟ್ಟು 7 ಜನ ಬಲಿಯಾಗಿದ್ದರು.
BowringHospitalTragedy #WallCollapse #ASRTraders #FIRRegistered #BengaluruNews #CommercialStreetPolice #BBMP #BruhatBengaluru #HospitalAccident #KannadaNews #FreedomTV



