
ಹುಬ್ಬಳ್ಳಿ: ತಾನು ಕೆಲಸ ಮಾಡಿದ ಕೆಲಸಕ್ಕೆ ಹೊಸ ಮೊಬೈಲ್ ಕೊಡಿಸಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕಾಗಿ ಸಿಟ್ಟಿಗೆದ್ದ ಗಾರೆ ಕೆಲಸಗಾರ ಸೆಂಟ್ರಿಂಗ್ ಮೇಸ್ತ್ರಿಯನ್ನೇ ಕಬ್ಬಿಣದ ರಾಡ್ನಿಂದ ಮನಬಂದಂತೆ ಹೊಡೆದು ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ರೇವಡಿಹಾಳ ಗ್ರಾಮದಲ್ಲಿ ನಡೆದಿದೆ.ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದ ನಿವಾಸಿಯಾದ ದಾದಾಪೀರ್ ಕೋಲ್ಕಾರ್ (38) ಕೊಲೆಯಾದ ದುರ್ದೈವಿ.ಅದೇ ಗ್ರಾಮದ ನಿವಾಸಿ ಅಜೀಂ ಜಮಖಾನೆ ಕೊಲೆ ಮಾಡಿ ಪರಾರಿಯಾಗಿರುವ ಕ್ರೂರಿಯಾಗಿದ್ದು ಹುಬ್ಬಳ್ಳಿಯಲ್ಲಿ ಈ ಘಟನೆಯಿಂದ ಜನತೆ ಬೆಚ್ಚಿ ಬಿದ್ದಿದ್ದಾರೆ.
ಆಗಿತ್ತು ಒಪ್ಪಂದ- ಉಲ್ಟಾ ಹೊಡೆದ ಮೇಸ್ತ್ರಿ!
ಕಟ್ಟಡ ನಿರ್ಮಾಣ ಮೇಸ್ತ್ರಿ ಆಗಿದ್ದ ದಾದಾಪೀರ್ ಬಳಿ ಆರೋಪಿ ಅಜೀಂ ಗಾರೆ ಕೆಲಸಗಾರನಾಗಿ ದುಡಿಯುತ್ತಿದ್ದ. ಇವರಿಬ್ಬರ ನಡುವೆ ಮೊದಲೇ ಒಂದು ಒಪ್ಪಂದವಾಗಿತ್ತು. ತಾನು ಮಾಡುವ ಕೆಲಸದ ಕೂಲಿ ಹಣದ ಬದಲಾಗಿ ತನಗೆ ಹೊಸ ಮೊಬೈಲ್ ಕೊಡಿಸಬೇಕು ಎಂದು ಅಜೀಂ ಮೇಸ್ತ್ರಿಗೆ ಶರತ್ತು ವಿಧಿಸಿದ್ದ ಎನ್ನಲಾಗಿದೆ.ಅದರಂತೆ ಹಲವು ದಿನಗಳ ಕಾಲ ಅಜೀಂ ಸತತವಾಗಿ ಕೆಲಸ ಮಾಡಿದ್ದ.ಆದರೆ,ಸಂಪೂರ್ಣ ಕೆಲಸ ಮುಗಿದ ನಂತರ “ನನಗೆ ಮೊಬೈಲ್ ಕೊಡಿಸು” ಎಂದು ಕೇಳಿದಾಗ ಮೇಸ್ತ್ರಿ ದಾದಾಪೀರ್ ಉಲ್ಟಾ ಹೊಡೆದಿದ್ದ ಎನ್ನಲಾಗಿದೆ.
ಮುಂಗಡ ಹಣ-ಮಾತಿನ ಚಕಮಕಿ!
ಇನ್ನೊಂದು ಆಯಾಮದಲ್ಲಿ ಮೇಸ್ತ್ರಿ ದಾದಾಪೀರ್ ಬಳಿ ಆರೋಪಿ ಅಜೀಂ ಈ ಮೊದಲೇ ಮುಂಗಡವಾಗಿ (ಅಡ್ವಾನ್ಸ್) ಭಾರಿ ಪ್ರಮಾಣದ ಹಣ ಪಡೆದಿದ್ದ ಎನ್ನಲಾಗಿದೆ. “ನೀನು ಈಗಾಗಲೇ ಮುಂಗಡ ಹಣ ಪಡೆದಿದ್ದೀಯಾ. ಆ ಕೊಟ್ಟ ಹಣವನ್ನೂ ವಾಪಸ್ ನೀಡುತ್ತಿಲ್ಲ,ಇತ್ತ ಸರಿಯಾಗಿ ಕೆಲಸಕ್ಕೂ ಬರುತ್ತಿಲ್ಲ.ನಿನಗೆ ಯಾವುದೇ ಕಾರಣಕ್ಕೂ ಹೊಸ ಮೊಬೈಲ್ ಕೊಡಿಸುವುದಿಲ್ಲ” ಎಂದು ದಾದಾಪೀರ್ ಖಡಕ್ ಆಗಿ ಹೇಳಿದ್ದಾನೆ. ಇದರಿಂದ ಇವರಿಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು.
ಮನೆಗೆ ನುಗ್ಗಿ ರಾಡ್ನಿಂದ ಜಜ್ಜಿ ಕೊಲೆ!
ಮೇಸ್ತ್ರಿ ತನಗೆ ಮೊಬೈಲ್ ಕೊಡಿಸುವುದಿಲ್ಲ ಎಂಬುದು ಖಾತ್ರಿಯಾಗುತ್ತಿದ್ದಂತೆ ತೀವ್ರ ಆಕ್ರೋಶಗೊಂಡ ಆರೋಪಿ ಅಜೀಂ, ದಾದಾಪೀರ್ ಮನೆಗೇ ನೇರವಾಗಿ ತೆರಳಿದ್ದಾನೆ. ಅಲ್ಲಿ ಮತ್ತೊಮ್ಮೆ ಇಬ್ಬರ ನಡುವೆ ಜಗಳ ವಿಕೋಪಕ್ಕೆ ತಿರುಗಿದೆ.ಈ ವೇಳೆ ಕೋಪೋದ್ರಿಕ್ತನಾದ ಅಜೀಂ,ಅಲ್ಲೇ ಇದ್ದ ಕಬ್ಬಿಣದ ರಾಡ್ ತೆಗೆದುಕೊಂಡು ದಾದಾಪೀರ್ ತಲೆ ಹಾಗೂ ದೇಹದ ಭಾಗಗಳಿಗೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ.ತೀವ್ರ ರಕ್ತಸ್ರಾವದಿಂದಾಗಿ ದಾದಾಪೀರ್ ಸ್ಥಳದಲ್ಲೇ ಮೃತಪಟ್ಟಿದ್ದು,ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸದ್ಯ ಹತ್ಯೆ ಕುರಿತು ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಹಂತಕ ಅಜೀಂ ಬಂಧನಕ್ಕಾಗಿ ಪೊಲೀಸರು ತೀವ್ರ ಜಾಲ ಬೀಸಿದ್ದಾರೆ.
#FreedomTV #HubballiCrime #MobileMurderCase #ChabbiVillage #Revadihal #CenteringMaistryKilled #CrimeNewsHubli #IronRodAttack #MurderMystery #HubliRuralPolice #BreakingNewsKannada #KarnatakaCrime #KannadaNews




