Uttar Pradeshದೇಶ/ವಿದೇಶ

ಉತ್ತರ ಪ್ರದೇಶದಲ್ಲಿ ಮಳೆಯ ರುದ್ರನರ್ತನ-100 ಮಂದಿ ಬಲಿ!

Cyclone in UP 100 people died

ಲಕ್ನೋ: ಉತ್ತರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಇಡೀ ರಾಜ್ಯ ತತ್ತರಿಸಿದೆ. ಪ್ರಕೃತಿ ವಿಕೋಪಕ್ಕೆ ಇದುವರೆಗೆ ಕನಿಷ್ಠ 100 ಮಂದಿ ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಪುಣ್ಯಕ್ಷೇತ್ರ ಪ್ರಯಾಗ್‌ರಾಜ್ ಜಿಲ್ಲೆಯೊಂದರಲ್ಲೇ ಗರಿಷ್ಠ 21 ಮಂದಿ ಸಾವನ್ನಪ್ಪಿರುವುದು ಜನರಲ್ಲಿ ನಡುಕ ಹುಟ್ಟಿಸಿದೆ.

ರಣಭೀಕರ ಗಾಳಿಗೆ UP ತತ್ತರ! ನಲುಗಿದ ಜನಜೀವನ

ರಾಜಧಾನಿ ಲಕ್ನೋ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಹವಾಮಾನ ದಿಢೀರ್ ಬದಲಾಗಿದ್ದು, ಇಡೀ ಪ್ರದೇಶವನ್ನು ಧೂಳಿನ ಮೋಡಗಳು ಆವರಿಸಿದ್ದವು. ಬಿರುಗಾಳಿಯ ವೇಗಕ್ಕೆ ನೂರಾರು ಮರಗಳು ಹಾಗೂ ವಿದ್ಯುತ್ ಕಂಬಗಳು ರಸ್ತೆಗಳ ಮೇಲೆ ಉರುಳಿ ಬಿದ್ದಿವೆ.

ಜಾಹೀರಾತು ಫಲಕಗಳು (Hoardings) ಕಟ್ಟಡಗಳ ಮೇಲಿದ್ದ ಟಿನ್ ಶೆಡ್‌ಗಳು ಬಿರುಗಾಳಿಗೆ ತರಗೆಲೆಗಳಂತೆ ಹಾರಿಹೋಗಿವೆ.ಹಲವು ಮನೆಗಳು ಕುಸಿದು ಬಿದ್ದಿದ್ದು, ಅವಶೇಷಗಳಡಿ ಸಿಲುಕಿದ್ದವರನ್ನು ರಕ್ಷಣಾ ಸಿಬ್ಬಂದಿ ಹರಸಾಹಸ ಪಟ್ಟು ಹೊರತೆಗೆಯುತ್ತಿದ್ದಾರೆ.

ಗಾಳಿಯಲ್ಲಿ ಹಾರಿ ಹೋದ ವ್ಯಕ್ತಿ!
ಬರೇಲಿ ಜಿಲ್ಲೆಯ ಬಮಿಯಾನಾ ಗ್ರಾಮದಲ್ಲಿ ನಡೆದ ಘಟನೆಯೊಂದು ಮೈನಡುಗಿಸುವಂತಿದೆ. ಬಿರುಗಾಳಿಯ ವೇಗಕ್ಕೆ ಟಿನ್ ಶೆಡ್ ಹಿಡಿದುಕೊಂಡಿದ್ದ ನಂಹೆ ಮಿಯಾನ್ ಎಂಬ ವ್ಯಕ್ತಿ ಶೆಡ್ ಸಮೇತ ಸುಮಾರು 50 ಅಡಿ ಎತ್ತರಕ್ಕೆ ಹಾರಿ ದೂರದ ಹೊಲಕ್ಕೆ ಬಿದ್ದಿದ್ದಾರೆ. ಈ ಭೀಕರ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ತೀವ್ರವಾಗಿ ಗಾಯಗೊಂಡಿರುವ ಅವರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್ ಖಡಕ್ ಸೂಚನೆ
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತಕ್ಷಣವೇ ಸಂತ್ರಸ್ತರ ನೆರವಿಗೆ ಧಾವಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ಹಾಗೂ ಮನೆ-ಪಶು ಹಾನಿಗೊಳಗಾದವರಿಗೆ ಮುಂದಿನ 24 ಗಂಟೆಯೊಳಗೆ ಆರ್ಥಿಕ ನೆರವು ತಲುಪಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಗಾಯಗೊಂಡವರಿಗೆ ಸೂಕ್ತ ಉಚಿತ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.

ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಮಳೆ ನಿಂತರೂ ಉರುಳಿಬಿದ್ದ ಮರಗಳನ್ನು ತೆರವುಗೊಳಿಸುವ ಕಾರ್ಯ ಮತ್ತು ವಿದ್ಯುತ್ ಸಂಪರ್ಕ ಸರಿಪಡಿಸುವ ಕೆಲಸ ಸಮರೋಪಾದಿಯಲ್ಲಿ ಸಾಗುತ್ತಿದೆ. ಹವಾಮಾನ ವೈಪರೀತ್ಯ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಜನತೆ ಸುರಕ್ಷಿತ ತಾಣಗಳಲ್ಲಿರಬೇಕೆಂದು ಮನವಿ ಮಾಡಲಾಗಿದೆ.

#UttarPradeshRain #UPWeather #Prayagraj #Lucknow #NaturalCalamity #YogiAdityanath #RainHavoc #BreakingNews #FreedomTV #WeatherUpdate #DisasterRelief

Comments (0)

Your email address will not be published. Required fields are marked *

Back to top button