Freedom TV

ಬಳ್ಳಾರಿಯಲ್ಲಿ ಅಕ್ಕಿ ದಂಧೆಯ ಕಿಂಗ್ ಪಿನ್ ಬಂಧನ

Ballary Rice kinpin arrest

ಬಳ್ಳಾರಿ: ಬಡವರ ಹಸಿವು ನೀಗಿಸಲು ಸರ್ಕಾರ ನೀಡುವ ‘ಅನ್ನಭಾಗ್ಯ’ ಅಕ್ಕಿಯನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ದೊಡ್ಡ ಜಾಲವೊಂದನ್ನು ಭೇದಿಸಿರುವ ಬಳ್ಳಾರಿ ಪೊಲೀಸರು, ಈ ದಂಧೆಯ ಕಿಂಗ್‌ಪಿನ್ ಗುಗ್ಗರಹಟ್ಟಿಯ ಬಿ. ಶರಬಯ್ಯನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಶರಬಯ್ಯನ ಮೇಲೆ 40 ಪ್ರಕರಣ- ದಂಧೆ ಮಾತ್ರ ನಿರಂತರ!
ಬಂಧಿತ ಶರಬಯ್ಯ ಸಾಮಾನ್ಯ ವ್ಯಕ್ತಿಯಲ್ಲ; ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಅಕ್ರಮ ಅಕ್ಕಿ ಸಾಗಾಣಿಕೆಗೆ ಸಂಬಂಧಿಸಿದಂತೆ ಸುಮಾರು 40ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.ನ್ಯಾಯಬೆಲೆ ಅಂಗಡಿಗಳಿಂದ ಅತ್ಯಲ್ಪ ದರಕ್ಕೆ ಪಡಿತರ ಅಕ್ಕಿಯನ್ನು ಸಂಗ್ರಹಿಸುತ್ತಿದ್ದ ಈತ, ಅದನ್ನು ಬೇರೆಡೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿದ್ದ ಎನ್ನಲಾಗಿದೆ.


ಪೊಲೀಸರ ವಿರುದ್ಧವೇ ಕೇಳಿಬಂದಿತ್ತು ಮಾಮೂಲು ವಸೂಲಿ ಆರೋಪ!
ಈ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಅಕ್ರಮ ಸಾಗಾಣಿಕೆ ವೇಳೆ ಪೊಲೀಸರೇ ಈತನಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಇತ್ತೀಚೆಗೆ ಸ್ವತಃ ಶರಬಯ್ಯನೇ, “ಬಳ್ಳಾರಿ ಎಸ್ಪಿ ಅವರ ಗನ್‌ಮ್ಯಾನ್ ತನ್ನಿಂದ 3 ಲಕ್ಷ ರೂಪಾಯಿ ಹಣ ಪಡೆದಿದ್ದಾನೆ” ಎಂದು ದೂರು ನೀಡಿದ್ದ.ಈ ದೂರು ಜಿಲ್ಲಾ ಪೊಲೀಸ್ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು.ಈ ದೂರಿನ ಬೆನ್ನಲ್ಲೇ ಪೊಲೀಸರು ಕಾರ್ಯಾಚರಣೆ ನಡೆಸಿ ಶರಬಯ್ಯನನ್ನು ಅರೆಸ್ಟ್ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.


ಸರ್ಕಾರದ ಅನ್ನಭಾಗ್ಯಕ್ಕೆ ದಂಧೆಕೋರರ ಕನ್ನ
ರಾಜ್ಯದ ಕಾಂಗ್ರೆಸ್ ಸರ್ಕಾರ ಬಡವರಿಗಾಗಿ ‘ಅನ್ನಭಾಗ್ಯ’ ಯೋಜನೆಯನ್ನು ಅತ್ಯಂತ ಮಹತ್ವಾಕಾಂಕ್ಷೆಯಿಂದ ಜಾರಿಗೆ ತಂದಿದೆ. ಆದರೆ, ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪನವರ ತವರಿನಲ್ಲೇ ಅಕ್ರಮ ಅಕ್ಕಿ ದಂಧೆ ನಡೆದ ಸುದ್ದಿ ಪ್ರಕಟವಾಗಿತ್ತು. ಈಗ ಬಳ್ಳಾರಿಯಲ್ಲೂ ಬೃಹತ್ ದಂಧೆ ಬಯಲಾಗಿರುವುದು ಆತಂಕಕಾರಿ ಸಂಗತಿ. ಲಕ್ಷಾಂತರ ಕುಟುಂಬಗಳ ಹೊಟ್ಟೆ ತುಂಬಿಸಬೇಕಾದ ಪಡಿತರ ದಂಧೆಕೋರರ ಪಾಲಾಗುತ್ತಿರುವುದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ದೌರ್ಬಲ್ಯವನ್ನು ಎತ್ತಿ ತೋರಿಸುತ್ತಿದೆ.

#BallariPolice #AnnaBhagyaScam #RiceSmuggling #SharabayyaArrested #FreedomTV #KarnatakaGovernment #PoliceCorruption #BreakingNews #FoodDepartment #BallariNews

Comments (0)

Your email address will not be published. Required fields are marked *

Back to top button