keralaರಾಜಕೀಯ

ಕೇರಳ ಸಿಎಂ ಆಗಿ ವಡಸ್ಸೇರಿ ದಾಮೋದರನ್ ಸತೀಶನ್ ಆಯ್ಕೆ

Vadaseeri Damodarna Satheeshan CM of Kerala

ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದು ಹತ್ತು ದಿನಗಳ ಬಳಿಕ ಸಿಎಂ ಹಗ್ಗಜಗ್ಗಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಅಧಿಕೃತವಾಗಿ ಘೋಷಿಸಿದೆ. ಈ ಮೂಲಕ ಸಂಸದ ಕೆ.ಸಿ. ವೇಣುಗೋಪಾಲ್ ಅವರಿಗೆ ಸಿಎಂ ಅವಕಾಶ ಕೈತಪ್ಪಿದೆ

ಸತೀಶನ್‌ಗೆ ಮಣೆ ಹಾಕಿದ ಹೈಕಮಾಂಡ್
ಕಳೆದ ಐದು ವರ್ಷಗಳಿಂದ ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದ ವಿ.ಡಿ. ಸತೀಶನ್ ಅವರ ಸಂಘಟನಾ ಶಕ್ತಿಗೆ ಹೈಕಮಾಂಡ್ ಮನ್ನಣೆ ನೀಡಿದೆ.ಸತತ 6 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅನುಭವ ಹಾಗೂ ಪಕ್ಷದ ಮೇಲೆ ಅವರಿಗಿರುವ ಹಿಡಿತವನ್ನು ಪರಿಗಣಿಸಿ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಈ ತೀರ್ಮಾನ ಕೈಗೊಂಡಿದ್ದಾರೆ.


ಕೇರಳ ಕಾಂಗ್ರೆಸ್ ಪಕ್ಷದ ಒಳಗಿನ ಗುಂಪು ಜಗಳಗಳನ್ನು ಯಶಸ್ವಿಯಾಗಿ ನಿವಾರಿಸಿ, ಕಾರ್ಯಕರ್ತರ ಮನೋಬಲವನ್ನು ಹೆಚ್ಚಿಸುವ ಜೊತೆಗೆ ಮೈತ್ರಿ ಪಕ್ಷಗಳನ್ನು ಏಕೀಕೃತ ವೇದಿಕೆಗೆ ತರಲು ವಿಡಿ. ಸತೀಶನ್ ಮಹತ್ವದ ಪಾತ್ರವಹಿಸಿದ್ದಾರೆ. ತಾರ್ಕಿಕತೆ, ಆಳವಾದ ಅಧ್ಯಯನ ಮತ್ತು ಪ್ರಭಾವಶಾಲಿ ಭಾಷಣಗಳ ಮೂಲಕ ಕೇರಳ ವಿಧಾನಸಭೆಯಲ್ಲಿ ವಿಶಿಷ್ಟವಾಗಿ ಇವರು ಗುರುತಿಸಿಕೊಂಡಿದ್ದಾರೆ. “ಅತ್ಯುತ್ತಮ ಶಾಸಕ” ಮತ್ತು “ಅತ್ಯುತ್ತಮ ಸಂಸದೀಯ ನಾಯಕ” ಪ್ರಶಸ್ತಿಗಳನ್ನು ಸಿಎಂ ವಡಸ್ಸೇರಿ ದಾಮೋದರನ್ ಸತೀಶನ್ ಅನೇಕ ಬಾರಿ ಪಡೆದಿದ್ದಾರೆ. ಈ ಎಲ್ಲಾ ಸಾಧನೆಗಳನ್ನು ಪರಿಗಣಿಸಿ ಕಾಂಗ್ರೆಸ್ ಹೈಕಮಾಂಡ್ ಇವರನ್ನು ಕೇರಳ ಸಿಎಂ ಆಗಿ ನೇಮಿಸಿದೆ.


ನಿರ್ಣಾಯಕವಾದ ಮುಸ್ಲಿಂ ಲೀಗ್ (IUML) ಬೆಂಬಲ
ಸಿಎಂ ಆಯ್ಕೆ ಪ್ರಕ್ರಿಯೆಯಲ್ಲಿ ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷವಾದ ಮುಸ್ಲಿಂ ಲೀಗ್ ನಿರ್ಣಾಯಕ ಪಾತ್ರ ವಹಿಸಿದೆ. ಆರಂಭದಿಂದಲೂ ವಿ.ಡಿ. ಸತೀಶನ್ ಪರವಾಗಿ ಬ್ಯಾಟಿಂಗ್ ಮಾಡಿದ್ದ ಮುಸ್ಲಿಂ ಲೀಗ್, ಸತೀಶನ್ ಅವರನ್ನೇ ಸಿಎಂ ಮಾಡಬೇಕು ಎಂದು ಪಟ್ಟು ಹಿಡಿದಿತ್ತು. ಮೈತ್ರಿಕೂಟದ ಹಿತದೃಷ್ಟಿಯಿಂದ ಹಾಗೂ ಮುಸ್ಲಿಂ ಲೀಗ್ ಮನವಿಗೆ ಸ್ಪಂದಿಸಿದ ಕಾಂಗ್ರೆಸ್ ಹೈಕಮಾಂಡ್, ಅಂತಿಮವಾಗಿ ಸತೀಶನ್ ಹೆಸರನ್ನು ಫೈನಲ್ ಮಾಡಿದೆ.

ಸಂಖ್ಯಾಬಲದ ಹಾದಿ
140 ಸದಸ್ಯ ಬಲದ ಕೇರಳ ವಿಧಾನಸಭೆಯಲ್ಲಿ ಈ ಬಾರಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) 102 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ.ಕಾಂಗ್ರೆಸ್: 63 ಸ್ಥಾನಗಳು, ಐಯುಎಂಎಲ್ (IUML): 22 ಸ್ಥಾನಗಳು ಉಳಿದ ಮಿತ್ರ ಪಕ್ಷಗಳು 17 ಸ್ಥಾನಗಳನ್ನು ಹೊಂದಿವೆ. ಎಲ್‌ಡಿಎಫ್ (LDF): 35 ಸ್ಥಾನಗಳು,ಎನ್‌ಡಿಎ (NDA): 03 ಸ್ಥಾನಗಳನ್ನು ಪಡೆದಿವೆ. ಮೈತ್ರಿಕೂಟದಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿದ್ದರೂ, ಅಧಿಕಾರ ಹಂಚಿಕೆ ಮತ್ತು ನಾಯಕತ್ವದ ಆಯ್ಕೆಯಲ್ಲಿ ಮಿತ್ರಪಕ್ಷಗಳ ಸಲಹೆ ಪಡೆಯುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ಒಪ್ಪಿಸಿ ಸತೀಶನ್ ಅವರನ್ನು ಗದ್ದುಗೆಗೆ ಏರಿಸಲಾಗುತ್ತಿದೆ..

ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ವಿ.ಡಿ. ಸತೀಶನ್ ಅವರಿಗೆ ರಾಜ್ಯದ ಹಲವು ನಾಯಕರು ಹಾಗೂ ಅಸಂಖ್ಯಾತ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

#VDSatheesan #KeralaNewCM #Congress #KeralaPolitics #IUML #KCVenugopal #RahulGandhi #UDFVictory #FreedomTV #KannadaNews #BreakingNews

Comments (0)

Your email address will not be published. Required fields are marked *

Back to top button