
ಬೆಂಗಳೂರು: ಕರ್ನಾಟಕದಲ್ಲಿ ಚಾರಣಿಗರ ಸುರಕ್ಷತೆಯನ್ನು ಖಚಿತಪಡಿಸಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದು, ದೇಶಕ್ಕೆ ಮಾದರಿಯಾಗುವಂತಹ ಪ್ರಮಾಣಿತ ಕಾರ್ಯವಿಧಾನರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಚಾರಣದ ವೇಳೆ ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸಲು ಮತ್ತು ಚಾರಣಿಗರ ಮೇಲೆ ನಿಗಾ ಇರಿಸಲು ಪ್ರತ್ಯೇಕ ಟ್ರ್ಯಾಕಿಂಗ್ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸುವಂತೆ ಅವರು ಅರಣ್ಯ ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಬಳಸುವ ‘ಎಂ-ಸ್ಟ್ರೈಪ್ಸ್’ ಮತ್ತು ಇಲಾಖೆಯ ‘ಇ-ಗಸ್ತು’ ಆ್ಯಪ್‌ಗಳ ಮಾದರಿಯಲ್ಲೇ ಈ ಹೊಸ ಆ್ಯಪ್ ಕಾರ್ಯನಿರ್ವಹಿಸಲಿದ್ದು, ಚಾರಣದ ಅವಧಿಯಲ್ಲಿ ಇದನ್ನು ತಾತ್ಕಾಲಿಕವಾಗಿ ಚಾರಣಿಗರ ಮೊಬೈಲ್‌ಗಳಲ್ಲಿ ಅಳವಡಿಸುವುದು ಕಡ್ಡಾಯವಾಗಲಿದೆ. ಇದರಿಂದ ಅರಣ್ಯದ ಒಳಗೆ ಚಾರಣಿಗರು ಎಲ್ಲಿದ್ದಾರೆ ಎಂಬ ನಿಖರ ಮಾಹಿತಿ ಇಲಾಖೆಗೆ ಲಭ್ಯವಾಗಲಿದೆ.

ಕೇವಲ ತಾಂತ್ರಿಕ ಸುರಕ್ಷತೆ ಮಾತ್ರವಲ್ಲದೆ, ಚಾರಣಿಗರ ಹಿತದೃಷ್ಟಿಯಿಂದ ‘ಗುಂಪು ವಿಮೆ’ ಸೌಲಭ್ಯವನ್ನು ಜಾರಿಗೆ ತರಲು ಸಚಿವರು ಸೂಚಿಸಿದ್ದಾರೆ. ಈ ನಿಯಮಾವಳಿಗಳು ಜಾರಿಗೆ ಬಂದರೆ, ಚಾರಣದ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸಿದರೂ ತುರ್ತು ನೆರವು ಪಡೆಯಲು ಮತ್ತು ವಿಮೆ ಮೂಲಕ ಆರ್ಥಿಕ ರಕ್ಷಣೆ ಪಡೆಯಲು ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅರಣ್ಯ ಪ್ರದೇಶಗಳಲ್ಲಿ ಚಾರಣಿಗರು ಹಾದಿ ತಪ್ಪುವುದು ಅಥವಾ ಅಪಾಯಕ್ಕೆ ಸಿಲುಕುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಈ ಹೊಸ ಎಸ್‌ಒಪಿ ಚಾರಣ ಪ್ರಿಯರಿಗೆ ಹೆಚ್ಚಿನ ಭದ್ರತೆ ನೀಡುವ ನಿರೀಕ್ಷೆಯಿದೆ. ಈ ಮೂಲಕ ಪರಿಸರ ಪ್ರವಾಸೋದ್ಯಮವನ್ನು ಮತ್ತಷ್ಟು ವ್ಯವಸ್ಥಿತಗೊಳಿಸಲು ಅರಣ್ಯ ಇಲಾಖೆ ಮುಂದಾಗಿದೆ.




