ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ದಿಢೀರ್ ಅಸ್ವಸ್ಥ..!

ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಕೊಂಡಜ್ಜಿ ಬಸಪ್ಪ ಸ್ಮರಣಾರ್ಥ ಹಾಗೂ ಪಿ.ಜಿ.ಆರ್. ಸಿಂಧ್ಯ ಅವರಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ದಿಢೀರ್ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ಕಾರ್ಯಕ್ರಮದ ವೇದಿಕೆಯಲ್ಲಿದ್ದಾಗಲೇ ಅವರಿಗೆ ವಾಂತಿಯಾದ ಅನುಭವವಾಗಿದ್ದು, ವಿಶ್ರಾಂತಿಗಾಗಿ ಮನೆಗೆ ತೆರಳಲು ಮುಂದಾದಾಗ ವೇದಿಕೆಯಿಂದ ಇಳಿಯುವ ವೇಳೆ ಅವರು ಕುಸಿದು ಬಿದ್ದರು. ಈ ಸಂದರ್ಭದಲ್ಲಿ ಸ್ಥಳದಲ್ಲಿ ಅಂಬ್ಯುಲೆನ್ಸ್ ಲಭ್ಯವಿಲ್ಲದ ಕಾರಣ, ಅಲ್ಲಿಯೇ ಇದ್ದ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ತಕ್ಷಣ ಸ್ಪಂದಿಸಿ, ತಮ್ಮದೇ ಸರ್ಕಾರಿ ವಾಹನದಲ್ಲಿ ಹೆಗ್ಡೆ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.
ವೈದ್ಯಕೀಯ ತಪಾಸಣೆಯ ನಂತರ ಸಂತೋಷ್ ಹೆಗ್ಡೆ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ (Sugar Level) ದಿಢೀರ್ ಕುಸಿದಿದ್ದರಿಂದ ಈ ರೀತಿ ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಸ್ಪೀಕರ್ ಯು.ಟಿ. ಖಾದರ್ ಅವರು ಆಸ್ಪತ್ರೆಯಲ್ಲೇ ಇದ್ದು ಹೆಗ್ಡೆ ಅವರ ಆರೋಗ್ಯ ವಿಚಾರಿಸಿದ್ದು, ಅವರ ಕುಟುಂಬಸ್ಥರೂ ಕೂಡ ಆಸ್ಪತ್ರೆಗೆ ಆಗಮಿಸಿದ್ದಾರೆ. ಸದ್ಯಕ್ಕೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದು, ನಿವೃತ್ತ ನ್ಯಾಯಮೂರ್ತಿಗಳ ಶೀಘ್ರ ಚೇತರಿಕೆಗಾಗಿ ಅಭಿಮಾನಿಗಳು ಹಾರೈಸುತ್ತಿದ್ದಾರೆ.




