bengaluruಸುದ್ದಿ

ಮೇಡಹಳ್ಳಿ ಬ್ರಿಡ್ಜ್ ಮೇಲೆ ಭೀಕರ ಅಪಘಾತ; ಮೂವರು ವೈಟ್‌ಫೀಲ್ಡ್ ನಿವಾಸಿಗಳ ಸಾವು!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹೊರವಲಯದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ದುರ್ದೈವಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಕೆಆರ್ ಪುರಂ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಮೇಡಹಳ್ಳಿ ಮೇಲ್ಸೇತುವೆಯ ಮೇಲೆ ಈ ಘಟನೆ ನಡೆದಿದೆ. ತಾಂತ್ರಿಕ ದೋಷದಿಂದಾಗಿ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಕ್ಯಾಂಟರ್ ವಾಹನಕ್ಕೆ ಅತೀ ವೇಗವಾಗಿ ಬಂದ ಟಾಟಾ ಏಸ್ ವಾಹನ ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟಾಟಾ ಏಸ್ ವಾಹನದ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ.

ಕೋಲಾರದಿಂದ ಬೆಂಗಳೂರಿಗೆ ಆಲೂಗಡ್ಡೆ ತುಂಬಿಸಿಕೊಂಡು ಬರುತ್ತಿದ್ದ ಕ್ಯಾಂಟರ್ ವಾಹನವು ಮೇಡಹಳ್ಳಿ ಬ್ರಿಡ್ಜ್ ಮೇಲೆ ಪಂಚರ್ ಆಗಿತ್ತು. ವಾಹನ ಚಾಲಕ ಟೈಯರ್ ಬದಲಾಯಿಸಲು ಮುಂದಾಗಿದ್ದ ಸಮಯದಲ್ಲಿ, ಹೊಸಕೋಟೆಯಿಂದ ಕೆಆರ್ ಪುರಂ ಕಡೆಗೆ ವೇಗವಾಗಿ ಬರುತ್ತಿದ್ದ ಟಾಟಾ ಏಸ್ ವಾಹನವು ನಿಂತಿದ್ದ ಲಾರಿಯನ್ನು ಗಮನಿಸದೇ ನೇರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಟಾಟಾ ಏಸ್ ಚಾಲಕ ಮತ್ತು ಸಹಾಯಕ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬ ವ್ಯಕ್ತಿಯನ್ನು ಕೆಆರ್ ಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಈ ಅಪಘಾತದಲ್ಲಿ ಮೃತಪಟ್ಟವರನ್ನು ವೈಟ್‌ಫೀಲ್ಡ್ ನಿವಾಸಿಗಳಾದ ಮಣಿಕಂಠ, ಸುರೇಶ್ ಮತ್ತು ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಉತ್ತರ ವಿಭಾಗದ ಡಿಸಿಪಿ ನೇಮಗೌಡ ಅವರು ಮಾಹಿತಿ ನೀಡಿ, ಮೇಲ್ನೋಟಕ್ಕೆ ಈಚರ್ ಕ್ಯಾಂಟರ್ ವಾಹನ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ತಿಳಿಸಿದ್ದಾರೆ. ತಾಂತ್ರಿಕ ತೊಂದರೆಯಿಂದ ವಾಹನ ಕೆಟ್ಟು ನಿಂತಾಗ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದ ಕಾರಣ ಈ ದುರಂತ ಸಂಭವಿಸಿದೆ ಎನ್ನಲಾಗುತ್ತಿದೆ. ಸದ್ಯ ಕೆಆರ್ ಪುರಂ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Comments (0)

Your email address will not be published. Required fields are marked *

Back to top button