Freedom TV

ಹೆಣ್ಣು ಮಗು ಎಂಬ ಕಾರಣಕ್ಕೆ ವಿಷವಿಕ್ಕಿ ಕೊಂದ ಹೆತ್ತ ತಂದೆ!

ಬೆಳಗಾವಿ: ಉಕ್ಕಡ ಗ್ರಾಮದಲ್ಲಿ ನಡೆದಿದ್ದ 15 ದಿನದ ಹಸುಗೂಸಿನ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಹೆಣ್ಣು ಮಗು ಎಂಬ ಕಾರಣಕ್ಕೆ ತಂದೆಯೇ ಮಗುವಿಗೆ ವಿಷವಿಕ್ಕಿ ಕೊಲೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದ್ದು, ಆರೋಪಿ ತಂದೆ ಭೀಮರಾಯ ಚಿಪ್ಪಾಡೆಯನ್ನು ಕಾಕತಿ ಪೊಲೀಸರು ಬಂಧಿಸಿದ್ದಾರೆ.

ಒಂದು ವರ್ಷದ ಹಿಂದೆ ಶೀಲಾ ಎಂಬುವವರನ್ನು ವಿವಾಹವಾಗಿದ್ದ ಭೀಮರಾಯನಿಗೆ ಗಂಡು ಮಗು ಬೇಕೆಂಬ ಹಂಬಲವಿತ್ತು. ಆದರೆ, 15 ದಿನಗಳ ಹಿಂದೆ ಹೆಣ್ಣು ಮಗು ಜನಿಸಿದ ಕಾರಣ ಆತ ತೀವ್ರ ಅಸಮಾಧಾನಗೊಂಡಿದ್ದ ಎನ್ನಲಾಗಿದೆ. ಮಾರ್ಚ್ 17 ರಂದು ಪತ್ನಿಯ ತವರು ಮನೆಗೆ ಹೋಗಿದ್ದ ಭೀಮರಾಯ, ಮಗುವನ್ನು ನೋಡಿ ವಾಪಸ್ ಹೋದ ಕೆಲವೇ ಹೊತ್ತಿನಲ್ಲಿ ಮಗು ಅಸ್ವಸ್ಥಗೊಂಡಿತ್ತು. ತಕ್ಷಣವೇ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಮಗು ಮೃತಪಟ್ಟಿತ್ತು.

ಹತ್ತಿ ಬೆಳೆಗೆ ಸಿಂಪಡಿಸುವ ಔಷಧಿಯನ್ನು ಮಗುವಿಗೆ ಉಣಿಸಿ ಕೊಲೆ ಮಾಡಲಾಗಿದೆ ಎಂಬ ಸಂಶಯ ವ್ಯಕ್ತವಾಗಿತ್ತು. ಘಟನೆ ನಡೆದ ಬಳಿಕ ಮಗುವಿನ ತಾಯಿ ಶೀಲಾ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಆರೋಪಿಗಾಗಿ ಪೊಲೀಸರು ಜಾಲ ಬೀಸಿದ್ದರು. ಡಿಸಿಪಿ ನಾರಾಯಣ್ ಭರಮನಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.ಸದ್ಯ ಪೊಲೀಸರ ವಶದಲ್ಲಿರುವ ಆರೋಪಿ ಭೀಮರಾಯ ಕೃತ್ಯ ಒಪ್ಪಿಕೊಂಡಿದ್ದಾನೆ ಎನ್ನಲಾಗಿದ್ದು, ಮಗುವಿನ ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

Comments (0)

Your email address will not be published. Required fields are marked *

Back to top button