
ಯಾದಗಿರಿ: ಮಹಲ್ ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಾಗಿದ್ದ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಹೊಸ ತಿರುವು ಸಿಕ್ಕಿದೆ. ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪ ಎದುರಿಸುತ್ತಿರುವ ಈ ಸ್ವಯಂ ಘೋಷಿತ ದೇವಮಾನವನ ವಿರುದ್ಧ ನಡೆಯುತ್ತಿದ್ದ ತನಿಖೆಗೆ ಹೈಕೋರ್ಟ್‌ನ ಕಲಬುರಗಿ ವಿಭಾಗೀಯ ಪೀಠವು ಮಧ್ಯಂತರ ತಡೆ ನೀಡಿದೆ. ಕಳೆದ ಕೆಲವು ದಿನಗಳಿಂದ ಬಂಧನದ ಭೀತಿಯಲ್ಲಿದ್ದ ಮುತ್ಯಾಗೆ ತಾತ್ಕಾಲಿಕವಾಗಿ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ಈ ಹಿಂದೆ ಮಲ್ಲಿಕಾರ್ಜುನ ಮುತ್ಯಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಯಾದಗಿರಿ ಜಿಲ್ಲಾ ನ್ಯಾಯಾಲಯವು ಮಾರ್ಚ್ 9ರಂದು ವಜಾ ಮಾಡಿತ್ತು. ಇದರಿಂದಾಗಿ ಪೊಲೀಸರು ಯಾವುದೇ ಕ್ಷಣದಲ್ಲಿ ಅವರನ್ನು ಬಂಧಿಸುವ ಸಾಧ್ಯತೆ ಇತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಮುತ್ಯಾ, ಪ್ರಕರಣದ ವಿಚಾರಣೆಗೆ ತಡೆ ನೀಡುವಂತೆ ಕೋರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠವು ಮಾರ್ಚ್ 18ರಂದು ತನಿಖೆಗೆ ತಡೆ ನೀಡಿ ಆದೇಶ ಹೊರಡಿಸಿದೆ.
ಫೆಬ್ರವರಿ 25ರಂದು ಶಹಾಪುರ ಸಿಡಿಪಿಒ ನೀಡಿದ ದೂರಿನ ಮೇರೆಗೆ ಗೋಗಿ ಪೊಲೀಸ್ ಠಾಣೆಯಲ್ಲಿ ಮುತ್ಯಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ರಾಜ್ಯ ಮಕ್ಕಳ ರಕ್ಷಣಾ ಆಯೋಗವು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿತ್ತು. ಇದರ ಆಧಾರದ ಮೇಲೆ ಜಿಲ್ಲಾಧಿಕಾರಿಗಳ ಆದೇಶದಂತೆ ಪೋಕ್ಸೊ ಕಾಯ್ದೆಯಡಿ ಕೇಸ್ ದಾಖಲಿಸಿಕೊಳ್ಳಲಾಗಿತ್ತು.
ಪ್ರಕರಣದ ತನಿಖೆ ನಡೆಸುತ್ತಿದ್ದ ಶಹಾಪುರ ಸಿಪಿಐ ಶರಣಗೌಡ ಅವರು ಈಗಾಗಲೇ ಮೊದಲ ಹಂತದ ವಿಚಾರಣೆ ಪೂರ್ಣಗೊಳಿಸಿದ್ದರು. ತನಿಖೆಯ ಭಾಗವಾಗಿ ಮುತ್ಯಾಗೆ ಸೇರಿದ ನಾಲ್ಕು ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿತ್ತು. ಆದರೆ ಈಗ ನ್ಯಾಯಾಲಯವು ತನಿಖೆಗೆ ತಡೆ ನೀಡಿರುವುದರಿಂದ ಪೊಲೀಸ್ ಪ್ರಕ್ರಿಯೆಗಳು ಸದ್ಯಕ್ಕೆ ಸ್ಥಗಿತಗೊಳ್ಳಲಿವೆ.
ಮತ್ತೊಂದೆಡೆ, ಈ ಪ್ರಕರಣವು ಜಿಲ್ಲೆಯಲ್ಲಿ ಸಾಕಷ್ಟು ಪರ-ವಿರೋಧದ ಚರ್ಚೆಗಳಿಗೆ ಕಾರಣವಾಗಿದೆ. ಮುತ್ಯಾ ವಿರುದ್ಧದ ಪೋಕ್ಸೊ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಅವರ ಭಕ್ತರು ಹಾಗೂ ಕೋಲಿ ಸಮಾಜದ ಮುಖಂಡರು ಪ್ರತಿಭಟನೆಗಳನ್ನು ನಡೆಸಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಹೈಕೋರ್ಟ್ ನೀಡಿರುವ ಮಧ್ಯಂತರ ತಡೆಯು ಪ್ರಕರಣಕ್ಕೆ ಹೊಸ ಆಯಾಮ ನೀಡಿದ್ದು, ಮುಂದಿನ ಕಾನೂನು ಹೋರಾಟ ಕುತೂಹಲ ಮೂಡಿಸಿದೆ.




