ಸುದ್ದಿ

ಪದ್ಮಶ್ರೀ ಪುರಸ್ಕೃತೆ ಡಾ. ಕಾಮಿನಿ ರಾವ್ ಮೇಲೆ ಸೊಸೆಯಿಂದ ಹಲ್ಲೆ!

ಬೆಂಗಳೂರು: ಖ್ಯಾತ ಸ್ತ್ರೀರೋಗ ತಜ್ಞೆ ಹಾಗೂ ಪದ್ಮಶ್ರೀ ಪುರಸ್ಕೃತೆ ಡಾ. ಕಾಮಿನಿ ರಾವ್ ಅವರು ತಮ್ಮ ಸೊಸೆಯಿಂದಲೇ ದೈಹಿಕ ಹಲ್ಲೆ ಹಾಗೂ ಮಾನಸಿಕ ಹಿಂಸೆಗೆ ಒಳಗಾಗಿದ್ದಾರೆ ಎಂಬ ಸುದ್ದಿ ಹೊರಬಂದಿದೆ. ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ವೈದ್ಯಕೀಯ ಲೋಕದಲ್ಲಿ ಈ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ. ಕುಮಾರ ಪಾರ್ಕ್ ಸಮೀಪವಿರುವ ಡಾ. ಕಾಮಿನಿ ರಾವ್ ಆಸ್ಪತ್ರೆಯಲ್ಲೇ ಈ ಕೃತ್ಯ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಡಾ. ಕಾಮಿನಿ ರಾವ್ ಅವರ ಸೊಸೆ ಪೂಜಾ ಸಿದ್ಧಾರ್ಥ್ ಸುಮಾರು 80 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಪಾಲನ್ನು ಪಡೆಯುವ ಉದ್ದೇಶದಿಂದ ಈ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆಸ್ತಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳಿಗೆ ಸಹಿ ಮಾಡುವಂತೆ ಒತ್ತಾಯಿಸಿ ಪೂಜಾ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು . ಘಟನೆಯ ಸಂದರ್ಭದಲ್ಲಿ ಡಾ. ಕಾಮಿನಿ ರಾವ್ ಅವರಿಂದ ಮೊಬೈಲ್ ಫೋನ್ ಮತ್ತು ಮನೆಯ ಕೀಗಳನ್ನು ಬಲವಂತವಾಗಿ ಕಿತ್ತುಕೊಂಡಿದ್ದಲ್ಲದೆ, ಆಸ್ತಿ ಪತ್ರಗಳು ಹಾಗೂ ನಗದು ಹಣವಿದ್ದ ಕಪಾಟಿನ ಕೀಗಳನ್ನು ಕಳವು ಮಾಡಿದ್ದಾರೆ ಎಂದು ದೂರಲಾಗಿದೆ.

ಫೆಬ್ರವರಿ 21ರಂದೇ ಈ ಗಲಾಟೆ ನಡೆದಿದ್ದರೂ, ಮೊಮ್ಮಗಳ ಭವಿಷ್ಯ ಹಾಗೂ ಕುಟುಂಬದ ಗೌರವವನ್ನು ಕಾಪಾಡುವ ಉದ್ದೇಶದಿಂದ ಡಾ. ಕಾಮಿನಿ ರಾವ್ ತಕ್ಷಣ ದೂರು ನೀಡಿರಲಿಲ್ಲ. ಆದರೆ, ಸೊಸೆಯ ಅತಿಯಾದ ಹಿಂಸೆಯನ್ನು ಸಹಿಸಲಾರದೆ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಸದ್ಯ ಹೈಗ್ರೌಂಡ್ಸ್ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

Comments (0)

Your email address will not be published. Required fields are marked *

Back to top button