Top Newsಸುದ್ದಿ

ಮುಟ್ಟಿನ ರಜೆ ಕಡ್ಡಾಯಗೊಳಿಸಿದರೆ ಮಹಿಳೆಯರಿಗೆ ಉದ್ಯೋಗ ನೀಡುವುದಿಲ್ಲ: ಸುಪ್ರೀಂ ಕೋರ್ಟ್ ಹೇಳಿಕೆ!

ಮಹಿಳೆಯರಿಗೆ ಸಂಬಳದೊಂದಿಗೆ ಕಡ್ಡಾಯ ಮುಟ್ಟಿನ ರಜೆ ನೀಡುವ ಬಗ್ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಅತ್ಯಂತ ಗಂಭೀರವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಮುಟ್ಟಿನ ಆರೋಗ್ಯ ಕಾಳಜಿ ಬಹಳ ಮುಖ್ಯವಾದರೂ, ಇದನ್ನು ಕಾನೂನಿನ ಮೂಲಕ ಕಡ್ಡಾಯಗೊಳಿಸಿದರೆ ಖಾಸಗಿ ವಲಯದ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಹಿಂದೇಟು ಹಾಕುವ ಸಾಧ್ಯತೆ ಇದೆ, ಇಂತಹ ನಿಯಮವು ಮಹಿಳೆಯರ ವೃತ್ತಿಜೀವನದ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು ಮತ್ತು ಉದ್ಯೋಗದಾತರ ಮನಸ್ಥಿತಿಯಿಂದಾಗಿ ಮಹಿಳೆಯರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ನೀಡಲು ಸಂಸ್ಥೆಗಳು ಹಿಂಜರಿಯಬಹುದು ಎಂದು ವಿವರಿಸಿದೆ.

ಪ್ರತಿ ತಿಂಗಳು ಕಡ್ಡಾಯ ರಜೆಯನ್ನು ಕಾನೂನುಬದ್ಧಗೊಳಿಸುವುದರಿಂದ ಮಹಿಳಾ ಉದ್ಯೋಗಿಗಳಲ್ಲಿ ಪುರುಷರಿಗಿಂತ ನಾವು ಕಡಿಮೆ ಎಂಬ ಭಾವನೆ ಮೂಡುವ ಅಪಾಯವಿದೆ, ಈಗಾಗಲೇ ಕೇರಳ ಮತ್ತು ಕರ್ನಾಟಕದಂತಹ ರಾಜ್ಯಗಳು ಸ್ವಯಂಪ್ರೇರಿತವಾಗಿ ಮುಟ್ಟಿನ ರಜೆಯನ್ನು ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದರೂ, ಇದನ್ನು ರಾಷ್ಟ್ರಮಟ್ಟದಲ್ಲಿ ಕಡ್ಡಾಯಗೊಳಿಸಿದರೆ ಉದ್ಯೋಗದಾತರು ಮಹಿಳೆಯರನ್ನು ತಾತ್ಸಾರದಿಂದ ನೋಡುವ ಸಾಧ್ಯತೆ ಇದೆ ಎಂದು ನ್ಯಾಯಮೂರ್ತಿ ಬಾಗ್ಚಿ ಅಭಿಪ್ರಾಯಪಟ್ಟಿದ್ದಾರೆ. ಅಂತಿಮವಾಗಿ ಈ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಈ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ತ ನೀತಿಗಳನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

Comments (0)

Your email address will not be published. Required fields are marked *

Back to top button