LPG ಕೊರತೆ;ಎಚ್ಸಿಎಲ್ಟೆಕ್ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ..!

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಂಟಾದ ಬಿಕ್ಕಟ್ಟಿನ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಮತ್ತು ಅನಿಲದ ಅಭಾವ ಎದುರಾಗಿದ್ದು, ಇದರ ಪರಿಣಾಮ ಭಾರತದಲ್ಲಿಯೂ ಎಲ್ಪಿಜಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ದೇಶದ ಅನೇಕ ಭಾಗಗಳಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ಗಳು ದುಬಾರಿಯಾಗಿರುವುದರ ಜೊತೆಗೆ ಲಭ್ಯತೆಯೂ ಕಡಿಮೆಯಾಗಿದೆ.
ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಅನೇಕ ಹೋಟೆಲ್ ಹಾಗೂ ರೆಸ್ಟೋರೆಂಟ್ಗಳು ಗ್ಯಾಸ್ ಕೊರತೆಯಿಂದ ತಾತ್ಕಾಲಿಕವಾಗಿ ಬಾಗಿಲು ಮುಚ್ಚುವ ಪರಿಸ್ಥಿತಿಗೆ ತಲುಪಿವೆ. ಈ ಸಮಸ್ಯೆಯ ಪರಿಣಾಮ ಕಾರ್ಪೊರೇಟ್ ಸಂಸ್ಥೆಗಳ ಮೇಲೂ ಬೀಳತೊಡಗಿದೆ. ಕಂಪನಿಗಳ ಕೆಫೆಟೇರಿಯಾಗಳಲ್ಲಿ ಉದ್ಯೋಗಿಗಳಿಗೆ ಆಹಾರ ತಯಾರಿಸಲು ಬಳಸುವ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ಗಳು ಸಿಗುವುದು ಕಷ್ಟವಾಗುತ್ತಿದೆ.
ಐಟಿ ಕಂಪನಿ ಎಚ್ಸಿಎಲ್ಟೆಕ್ ತನ್ನ ಕೆಲವು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ವ್ಯವಸ್ಥೆಯನ್ನು ಕಲ್ಪಿಸಿದೆ. ಚೆನ್ನೈ ಕಚೇರಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಮಾರ್ಚ್ 12 ಮತ್ತು 13ರಂದು ಮನೆಯಿಂದಲೇ ಕೆಲಸ ಮಾಡುವ ಅವಕಾಶ ಸೂಚಿಸಲಾಗಿದೆ.
ಹಲವು ಕಾರ್ಪೊರೇಟ್ ಸಂಸ್ಥೆಗಳು ಪರಿಸ್ಥಿತಿಯನ್ನು ನಿಭಾಯಿಸಲು ವಿವಿಧ ಕ್ರಮಗಳನ್ನು ಕೈಗೊಂಡಿವೆ. ಕೆಲವು ಕಂಪನಿಗಳು ಇಂಟರ್ನಲ್ “ವಾರ್ ರೂಮ್”ಗಳನ್ನು ಸ್ಥಾಪಿಸಿ ಎಲ್ಪಿಜಿ ಸರಬರಾಜಿನ ಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿವೆ.
ಬೆಂಗಳೂರು ಕಚೇರಿಗಳಲ್ಲಿರುವ ಉದ್ಯೋಗಿಗಳಿಗೆ ಕೆಫೆಟೇರಿಯಾಗಳಲ್ಲಿ ಆಹಾರದ ಕೊರತೆ ಉಂಟಾಗಬಹುದೆಂದು ಮುನ್ನೆಚ್ಚರಿಕೆ ನೀಡಿದೆ. ಲೈವ್ ಫುಡ್ ಕೌಂಟರ್ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಉದ್ಯೋಗಿಗಳು ಮನೆಯಿಂದಲೇ ಅಡುಗೆ ಮಾಡಿಕೊಂಡು ಆಹಾರ ತರಬೇಕೆಂದು, ಚೆನ್ನೈ ಕಚೇರಿಯ ಉದ್ಯೋಗಿಗಳಿಗೂ ಸಹ ತಿಳಿಸಲಾಗಿದೆ.
ಕಮರ್ಷಿಯಲ್ ಗ್ಯಾಸ್ ಮಾತ್ರವಲ್ಲದೆ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಲಭ್ಯತೆಯೂ ಕೆಲವು ಪ್ರದೇಶಗಳಲ್ಲಿ ಕಷ್ಟಕರವಾಗಿದೆ. ಪಶ್ಚಿಮ ಏಷ್ಯಾದ ಪರಿಸ್ಥಿತಿ ಸುಧಾರಿಸುವವರೆಗೆ ಈ ಸಮಸ್ಯೆ ಮುಂದುವರಿಯುವ ಸಾಧ್ಯತೆ ಇದೆ.




