ದೇಶ/ವಿದೇಶ

ಮಧ್ಯಪ್ರಾಚ್ಯ ಯುದ್ಧದ ಕಿಚ್ಚು; ಭಾರತೀಯರ ರಕ್ಷಣೆಗೆ ಮೋದಿ ಸರ್ಕಾರ ಸನ್ನದ್ಧ!

ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವು ಭೀಕರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಜಾಗತಿಕ ಮಟ್ಟದಲ್ಲಿ ಭಾರಿ ಆತಂಕ ಸೃಷ್ಟಿಸಿದೆ. ಈ ಯುದ್ಧೋನ್ಮಾದದ ಪ್ರತಿಧ್ವನಿ ಭಾರತದ ಸಂಸತ್‌ನಲ್ಲೂ ಕೇಳಿಬಂದಿದ್ದು, ರಾಜ್ಯಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಈ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಯುದ್ಧ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆಯೇ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಪ್ರತಿಯೊಬ್ಬ ಭಾರತೀಯನನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಕೇಂದ್ರ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರಾಚ್ಯದ ರಾಷ್ಟ್ರಗಳಾದ ಕತಾರ್ ಮತ್ತು ಅರಬ್ ಒಕ್ಕೂಟದ ಅಧ್ಯಕ್ಷರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಭಾರತೀಯರ ರಕ್ಷಣಾ ಕಾರ್ಯಾಚರಣೆಗೆ ಬೆಂಬಲ ಕೋರಿದ್ದಾರೆ. ಭಾರತೀಯರ ಸುರಕ್ಷತೆಯ ಬಗ್ಗೆ ಪ್ರಧಾನಿಯವರು ನಿರಂತರವಾಗಿ ವಿದೇಶಾಂಗ ಇಲಾಖೆಯೊಂದಿಗೆ ಚರ್ಚಿಸುತ್ತಿದ್ದಾರೆ. ಇರಾನ್‌ನಿಂದ ಇದುವರೆಗೆ ಸುಮಾರು 67 ಸಾವಿರ ಭಾರತೀಯರನ್ನು ಯಶಸ್ವಿಯಾಗಿ ಮತ್ತು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದ್ದಾರೆ.

ಯುದ್ಧದ ಭೀಕರತೆಗೆ ಅಮಾಯಕ ನಾಗರಿಕರು ಬಲಿಯಾಗುತ್ತಿರುವುದು ಅತ್ಯಂತ ದುರದೃಷ್ಟಕರ ಮತ್ತು ದುಃಖದ ಸಂಗತಿ ಎಂದು ಜೈಶಂಕರ್ ಕಳವಳ ವ್ಯಕ್ತಪಡಿಸಿದ್ದಾರೆ. ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಉಳಿದಿರುವ ಇತರ ಭಾರತೀಯರನ್ನು ಸ್ಥಳಾಂತರಿಸಲು ಅಗತ್ಯವಿರುವ ಎಲ್ಲಾ ರಾಜತಾಂತ್ರಿಕ ಮಾರ್ಗಗಳನ್ನು ಬಳಸಲಾಗುತ್ತಿದೆ. ಭಾರತ ಸರ್ಕಾರವು ಈ ಪರಿಸ್ಥಿತಿಯನ್ನು ಕ್ಷಣಕ್ಷಣಕ್ಕೂ ಗಮನಿಸುತ್ತಿದ್ದು, ತುರ್ತು ಸಂದರ್ಭ ಎದುರಿಸಲು ಸಜ್ಜಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Comments (0)

Your email address will not be published. Required fields are marked *

Back to top button