ಅಮೆರಿಕ ಯುದ್ಧದ ಅಗ್ನಿಪರ್ವ; 660 ಲಕ್ಷ ಕೋಟಿ ರೂಪಾಯಿಗಳ ಭಸ್ಮ!

2001ರ ಸೆಪ್ಟೆಂಬರ್ 11… ಅಮೆರಿಕದ ಮೇಲೆ ನಡೆದ ಆ ಒಂದು ದಾಳಿ ಇಡೀ ಜಗತ್ತಿನ ಭೂಪಟವನ್ನೇ ಬದಲಿಸಿತು. ಅಂದು ಶುರುವಾದ ಅಮೆರಿಕದ ‘ವಾರ್ ಆನ್ ಟೆರರ್’ ಇಂದು ಎಲ್ಲಿಗೆ ಬಂದು ನಿಂತಿದೆ ಗೊತ್ತಾ? ಕಳೆದ 25 ವರ್ಷಗಳಲ್ಲಿ ಅಮೆರಿಕ ಬರೋಬ್ಬರಿ 10 ದೇಶಗಳ ಮೇಲೆ ಬಾಂಬ್ ಮಳೆ ಸುರಿಸಿದೆ! ಅಫ್ಘಾನಿಸ್ತಾನದಿಂದ ಹಿಡಿದು ಈಗಿನ ಇರಾನ್ವರೆಗೆ ಅಮೆರಿಕ ಹರಿಸಿದ ರಕ್ತದ ಕೆರೆ ಎಷ್ಟು? ಸುಟ್ಟ ಬೂದಿಯಾದ ಹಣವೆಷ್ಟು?

ಅಫ್ಘಾನಿಸ್ತಾನ! ಅಮೆರಿಕದ ಇತಿಹಾಸದಲ್ಲೇ ಅತ್ಯಂತ ದೀರ್ಘಕಾಲದ ಯುದ್ಧವಿದು. 20 ವರ್ಷಗಳ ಕಾಲ ಸತತವಾಗಿ ಹೋರಾಡಿ, 2 ಲಕ್ಷಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿ, ಕೊನೆಗೆ ಏನಾಯಿತು? ಅಮೆರಿಕ ಹಿಂದೆ ಸರಿದ ಕೂಡಲೇ ಅದೇ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂತು! ಇನ್ನು ಇರಾಕ್ ಕಥೆಯಂತೂ ಅದಕ್ಕಿಂತ ಭೀಕರ. ಅಣ್ವಸ್ತ್ರಗಳಿವೆ ಎಂಬ ಸುಳ್ಳು ನೆಪವೊಡ್ಡಿ ಇಡೀ ದೇಶವನ್ನೇ ಸ್ಮಶಾನ ಮಾಡಲಾಯಿತು. ಆದರೆ ಅಲ್ಲಿ ಸಿಕ್ಕಿದ್ದು ಕೇವಲ ಸಾವು ಮತ್ತು ವಿನಾಶ ಮಾತ್ರ! ಇಲ್ಲಿಂದಲೇ ಐಸಿಸ್ (ISIS) ನಂತಹ ಭೀಕರ ಭಯೋತ್ಪಾದಕ ಸಂಘಟನೆಗಳು ಹುಟ್ಟಿಕೊಂಡವು ಎಂಬುದು ಇತಿಹಾಸ ಮರೆಯದ ಕಪ್ಪು ಚುಕ್ಕೆ.”

“ಇನ್ನು ಅಮೆರಿಕದ ಯುದ್ಧ ತಂತ್ರ ಈಗ ಬದಲಾಗಿದೆ. ಈಗ ಸೈನಿಕರಿಗಿಂತ ಹೆಚ್ಚಾಗಿ ‘ರಿಮೋಟ್ ಕಂಟ್ರೋಲ್ ಮೃತ್ಯು’ ಅಂದರೆ ಡ್ರೋನ್ಗಳದ್ದೇ ಅಬ್ಬರ! ಪಾಕಿಸ್ತಾನ, ಯೆಮೆನ್ ಮತ್ತು ಸೊಮಾಲಿಯಾದಲ್ಲಿ ಆಕಾಶದಿಂದಲೇ ಮಿಸೈಲ್ ಹರಿಸಿ ಶತ್ರುಗಳನ್ನು ಸದೆಬಡಿಯಲಾಗುತ್ತಿದೆ. ಇನ್ನು ಇತ್ತೀಚಿನ ಮಹತ್ವದ ಬೆಳವಣಿಗೆಯೆಂದರೆ ಇರಾನ್ ಮೇಲಿನ ದಾಳಿ! ಅಧ್ಯಕ್ಷ ಟ್ರಂಪ್ ನೇತೃತ್ವದಲ್ಲಿ ಇರಾನ್ನ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿ ನಡೆಸಿದ ‘ಆಪರೇಷನ್ ಎಪಿಕ್ ಫ್ಯೂರಿ’ ಇಡೀ ಮಧ್ಯಪ್ರಾಚ್ಯವನ್ನೇ ಬೆಂಕಿಯ ಉಂಡೆಯನ್ನಾಗಿ ಮಾಡಿದೆ. ಇರಾನ್ನ ಪ್ರಬಲ ನಾಯಕರು ಮಣ್ಣು ಮುಕ್ಕಿದ್ದಾರೆ, ಆದರೆ ಈ ಯುದ್ಧದ ಜ್ವಾಲೆ ಇಡೀ ಜಗತ್ತನ್ನೇ ಸುಡುವ ಮುನ್ಸೂಚನೆ ನೀಡುತ್ತಿದೆ!”

ಈ ಎಲ್ಲಾ ಯುದ್ಧಗಳಿಗಾಗಿ ಅಮೆರಿಕ ಖರ್ಚು ಮಾಡಿದ ಹಣವೆಷ್ಟು ಗೊತ್ತಾ? ಬರೋಬ್ಬರಿ $8 ಟ್ರಿಲಿಯನ್ ಡಾಲರ್! ಅಂದರೆ ಭಾರತೀಯ ರೂಪಾಯಿಗಳಲ್ಲಿ ಸುಮಾರು 660 ಲಕ್ಷ ಕೋಟಿ ರೂಪಾಯಿಗಳು! ಯೋಚನೆ ಮಾಡಿ, ಇಷ್ಟು ಹಣವಿದ್ದರೆ ಜಗತ್ತಿನ ಹಸಿವನ್ನೇ ನೀಗಿಸಬಹುದಿತ್ತು. ಆದರೆ ಈ ಹಣ ಕ್ಷಿಪಣಿಗಳಿಗೆ, ಬಾಂಬ್ಗಳಿಗೆ ಮತ್ತು ಯುದ್ಧದ ಬಡ್ಡಿಯನ್ನು ಕಟ್ಟಲಿಕ್ಕೇ ವ್ಯಯವಾಗಿದೆ. ಬರೋಬ್ಬರಿ 9 ಲಕ್ಷದ 40 ಸಾವಿರ ಜನರು ಈ ಯುದ್ಧಗಳಲ್ಲಿ ನೇರವಾಗಿ ಬಲಿಯಾಗಿದ್ದಾರೆ. ಇದು ಕೇವಲ ಅಂಕಿಅಂಶವಲ್ಲ, ಇದು ಮನುಕುಲದ ಆರ್ತನಾದ!”
ಅಮೆರಿಕ ತಾನು ಗೆದ್ದೆ ಎಂದು ಬೀಗುತ್ತಿರಬಹುದು, ಆದರೆ ಈ ಯುದ್ಧಗಳು ಸೃಷ್ಟಿಸಿರುವ ಅಸ್ಥಿರತೆ, ಹಸಿವು ಮತ್ತು ಸಾವು ನೋವುಗಳು ಜಗತ್ತನ್ನು ಮತ್ತೊಂದು ಮಹಾಯುದ್ಧದ ಅಂಚಿಗೆ ತಳ್ಳುತ್ತಿವೆ. ಶಾಂತಿ ಸ್ಥಾಪನೆಯ ಹೆಸರಿನಲ್ಲಿ ನಡೆಯುತ್ತಿರುವ ಈ ಮಾರಣಹೋಮಕ್ಕೆ ಅಂತ್ಯ ಹಾಡುವವರು ಯಾರು? ಇದು ಇಂದಿನ ಜಗತ್ತು ಎದುರಿಸುತ್ತಿರುವ ಅತಿದೊಡ್ಡ ಪ್ರಶ್ನೆ!.




