ಯುದ್ಧದ ಮಾಫಿಯಾ; ಶವಗಳ ಮೇಲೆ ನಡೆಯುವ ವ್ಯಾಪಾರ!

ನಾವೆಲ್ಲರೂ ಯುದ್ಧವನ್ನು ಸಾವು, ನೋವು ಮತ್ತು ದೇಶಭಕ್ತಿಯ ಕನ್ನಡಕದಿಂದ ನೋಡುತ್ತೇವೆ. ಆದರೆ ನಿಮಗೆ ಗೊತ್ತಾ? ಯುದ್ಧ ಎನ್ನುವುದು ಜಗತ್ತಿನ ಅತಿ ದೊಡ್ಡ ‘ಬ್ಯುಸಿನೆಸ್’! ಗಡಿಯಲ್ಲಿ ಸೈನಿಕರು ಪ್ರಾಣ ಬಿಡುತ್ತಿದ್ದರೆ, ಅತ್ತ ಎಸಿ ರೂಮಿನಲ್ಲಿ ಕುಳಿತ ಕೆಲವರು ಸಾವಿರಾರು ಕೋಟಿ ಲಾಭ ಎಣಿಸುತ್ತಿರುತ್ತಾರೆ.

“ಹೌದು, ಯುದ್ಧಗಳು ನಡೆದಷ್ಟೂ ಯಾರಿಗೆ ಲಾಭ? ಅಮೆರಿಕದಂತಹ ದೇಶಗಳ ಬೃಹತ್ ಶಸ್ತ್ರಾಸ್ತ್ರ ಕಂಪನಿಗಳಿಗೆ! ಸೆಪ್ಟೆಂಬರ್ 11ರ ದಾಳಿಯ ನಂತರ ಈ ಕಂಪನಿಗಳ ಷೇರು ಮೌಲ್ಯ ಬರೋಬ್ಬರಿ 1000% ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಒಂದು ‘ಟೊಮಾಹಾಕ್’ ಕ್ಷಿಪಣಿ ಉಡಾವಣೆಯಾದರೆ ಸಾಕು, ಆ ಕಂಪನಿಯ ಖಾತೆಗೆ ಕೋಟ್ಯಂತರ ರೂಪಾಯಿ ಜಮೆಯಾಗುತ್ತದೆ. ಅಂದರೆ, ಶಾಂತಿ ನೆಲೆಸಿದರೆ ಇವರಿಗೆ ನಷ್ಟ, ಯುದ್ಧ ನಡೆದರೆ ಮಾತ್ರ ಇವರಿಗೆ ಹಬ್ಬ! ಇವರನ್ನು ಜಗತ್ತು ‘ಮರ್ಚೆಂಟ್ಸ್ ಆಫ್ ಡೆತ್’ ಅಥವಾ ಸಾವಿನ ವ್ಯಾಪಾರಿಗಳು ಎಂದು ಕರೆಯುತ್ತದೆ.”

ಈಗಿನ ಯುದ್ಧಗಳಲ್ಲಿ ಕೇವಲ ಸರ್ಕಾರಿ ಸೈನಿಕರಿಲ್ಲ, ಬದಲಾಗಿ ‘ಬಾಡಿಗೆ ಸೈನಿಕರ’ ಹಾವಳಿ ಹೆಚ್ಚಾಗಿದೆ. ಬ್ಲ್ಯಾಕ್‌ವಾಟರ್‌ನಂತಹ ಖಾಸಗಿ ಕಂಪನಿಗಳು ಸಾವಿರಾರು ಕೋಟಿ ರೂಪಾಯಿ ಪಡೆದು ಯುದ್ಧಭೂಮಿಯಲ್ಲಿ ಹೋರಾಡುತ್ತಿವೆ. ಇವರಿಗೆ ಯಾವುದೇ ದೇಶದ ಸಂವಿಧಾನವಾಗಲಿ ಅಥವಾ ಮಾನವ ಹಕ್ಕುಗಳಾಗಲಿ ಅನ್ವಯಿಸುವುದಿಲ್ಲ! ಲಾಭಕ್ಕಾಗಿ ಯಾರನ್ನು ಬೇಕಾದರೂ ಕೊಲ್ಲುವ ಈ ಪ್ರೈವೇಟ್ ಆರ್ಮಿಗಳು ಇವತ್ತು ಇರಾಕ್ ಮತ್ತು ಆಫ್ರಿಕಾದಲ್ಲಿ ಅಧಿಪತ್ಯ ಸ್ಥಾಪಿಸಿವೆ. ಇದು ಮನುಕುಲ ಕಂಡ ಅತ್ಯಂತ ಅಪಾಯಕಾರಿ ಬೆಳವಣಿಗೆ!”

“ಯುದ್ಧದ ಹಿಂದಿನ ಮತ್ತೊಂದು ರಹಸ್ಯ ಅಡಗಿರುವುದು ಭೂಮಿಯ ಆಳದಲ್ಲಿ! ಇರಾಕ್ ಮೇಲೆ ಅಮೆರಿಕ ದಾಳಿ ಮಾಡಿದ್ದು ಅಣ್ವಸ್ತ್ರಗಳಿಗಾಗಿ ಅಲ್ಲ, ಬದಲಾಗಿ ಅಲ್ಲಿನ ‘ಕಪ್ಪು ಬಂಗಾರ’ ಅಂದರೆ ತೈಲದ ಮೇಲೆ ಕಣ್ಣಿಟ್ಟು ಎಂಬುದು ಈಗ ಜಗತ್ತಿನ ಬಹಿರಂಗ ಸತ್ಯ. ಲಿಬಿಯಾ, ಸಿರಿಯಾ ಮತ್ತು ಈಗಿನ ಇರಾನ್ ಸಂಘರ್ಷದ ಹಿಂದೆ ಇರುವುದು ಸಂಪನ್ಮೂಲಗಳ ಮೇಲಿನ ಹತೋಟಿ. ಯಾವ ದೇಶದಲ್ಲಿ ತೈಲ ಅಥವಾ ಅಪರೂಪದ ಖನಿಜಗಳಿವೆಯೋ, ಆ ದೇಶವೇ ಶಕ್ತಿಶಾಲಿಗಳ ಟಾರ್ಗೆಟ್! ಇದು ಗಡಿಯ ರಕ್ಷಣೆಗಾಗಿ ನಡೆಯುವ ಯುದ್ಧವಲ್ಲ, ಇದು ಭೂಮಿಯ ಒಳಗಿನ ಖಜಾನೆಗಾಗಿ ನಡೆಯುತ್ತಿರುವ ದರೋಡೆ!”
“ಯೋಚನೆ ಮಾಡಿ… ಯುದ್ಧ ಆರಂಭವಾಗುವುದು ಮಿಸೈಲ್‌ಗಳಿಂದ ಅಲ್ಲ, ಬದಲಾಗಿ ಲಾಭದ ಹಪಾಹಪಿಯಿಂದ. ಶಸ್ತ್ರಾಸ್ತ್ರ ಕಂಪನಿಗಳ ಲಾಬಿ ಇರುವವರೆಗೂ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯವೇ? ಗಡಿಯಲ್ಲಿ ಸತ್ತವನು ಸೈನಿಕ, ಮನೆಯಲ್ಲಿ ಅತ್ತವಳು ತಾಯಿ, ಆದರೆ ಗೆದ್ದವನು ಮಾತ್ರ ಕಾರ್ಪೊರೇಟ್ ಮಾಲೀಕ! ಇದೆ ಇಂದಿನ ಯುದ್ಧಗಳ ಕರಾಳ ಮತ್ತು ಕ್ರೂರ ಸತ್ಯ.




