ಕ್ರೈಂ ಸ್ಟೋರಿಜಿಲ್ಲೆಸುದ್ದಿ

ಅಣ್ಣನನ್ನೇ ವಿವಸ್ತ್ರಗೊಳಿಸಿ ಕಲ್ಲಿನಿಂದ ಜಜ್ಜಿದ ತಮ್ಮ..!

ಮಂಡ್ಯ: ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ನಡೆದ ಯುವಕನ ಮೇಲೆ ವಿವಸ್ತ್ರಗೊಳಿಸಿ ಕಲ್ಲಿನಿಂದ ಹಲ್ಲೆ ಮಾಡಿದ ಭೀಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಗಿರೀಶ್ ಮತ್ತು ಮದ್ದಪ್ಪ ಎಂಬುವವರೇ ಬಂಧಿತ ಆರೋಪಿಗಳು. ನಿನ್ನೆಯಷ್ಟೇ ಗಿರೀಶ್‌ನನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಇಂದು ಬೆಳಿಗ್ಗೆ ಮತ್ತೊಬ್ಬ ಆರೋಪಿ ಮದ್ದಪ್ಪನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಲ್ಲೆಗೊಳಗಾದ ಪ್ರಕಾಶ್ ಮತ್ತು ಹಲ್ಲೆ ಮಾಡಿದ ಗಿರೀಶ್ ಪರಸ್ಪರ ಅಣ್ಣ-ತಮ್ಮಂದಿರಾಗಿದ್ದು, ಕೌಟುಂಬಿಕ ಹಗೆತನವೇ ಈ ಘೋರ ಕೃತ್ಯಕ್ಕೆ ಕಾರಣವೆಂದು ತಿಳಿದುಬಂದಿದೆ.

ಈ ಎರಡು ಕುಟುಂಬಗಳ ನಡುವೆ ಕಳೆದ ಹಲವು ವರ್ಷಗಳಿಂದ ಮನಸ್ತಾಪವಿತ್ತು. ಹಳೆಯ ಚುನಾವಣೆಯೊಂದರಲ್ಲಿ ಆರೋಪಿ ಗಿರೀಶ್ ಕುಟುಂಬಕ್ಕೆ ಪ್ರಕಾಶ್ ಕುಟುಂಬಸ್ಥರು ಬೆಂಬಲ ನೀಡಿರಲಿಲ್ಲ ಎಂಬುದು ಜಗಳದ ಮೂಲವಾಗಿತ್ತು. ಇತ್ತೀಚೆಗೆ ಗ್ರಾಮದ ಯುವತಿಯೊಬ್ಬಳು ನಾಪತ್ತೆಯಾಗಿ ಪ್ರೇಮ ವಿವಾಹವಾಗಿದ್ದಳು. ಈ ಮದುವೆಗೆ ಪ್ರಕಾಶ್ ಸಹಕಾರ ನೀಡಿದ್ದಾನೆ ಎಂಬ ಸಂಶಯ ಗಿರೀಶ್ ತಂಡದಲ್ಲಿತ್ತು. ಇದೇ ಕಾರಣಕ್ಕೆ ಕಳೆದ ಕೆಲವು ದಿನಗಳ ಹಿಂದೆ ಪ್ರಕಾಶ್‌ಗೆ ಕರೆ ಮಾಡಿ ಅವಾಚ್ಯವಾಗಿ ನಿಂದಿಸಲಾಗಿತ್ತು.

ನಿಂದನೆಯಿಂದ ಆಕ್ರೋಶಗೊಂಡಿದ್ದ ಪ್ರಕಾಶ್, ಫೆಬ್ರವರಿ 21ರಂದು ಊರಿಗೆ ಬಂದು ಗಿರೀಶ್ ಪಟಾಲಂ ಜೊತೆ ಗಲಾಟೆ ಮಾಡಿದ್ದನು. ಈ ಸಂಬಂಧ ಕೆ.ಆರ್.ಪೇಟೆ ಠಾಣೆಯಲ್ಲಿ ಪ್ರಕಾಶ್ ಸೇರಿದಂತೆ ಆರು ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಸಂಚು ರೂಪಿಸಿದ್ದ ಗಿರೀಶ್ ಮತ್ತು ತಂಡ, ಫೆಬ್ರವರಿ 22ರಂದು ಪ್ರಕಾಶ್ ಮತ್ತು ನವೀನ್ ಮೇಲೆ ಮಾರಣಾಂತಿಕ ದಾಳಿ ನಡೆಸಿತ್ತು. ಅಮಾನವೀಯವಾಗಿ ವಿವಸ್ತ್ರಗೊಳಿಸಿ ಕಲ್ಲಿನಿಂದ ಜಜ್ಜಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭರಾಣಿ ಪ್ರಕರಣದ ಕುರಿತು ಮಾಹಿತಿ ನೀಡಿದ್ದು, ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Comments (0)

Your email address will not be published. Required fields are marked *

Back to top button