Tuesday, February 24, 2026
29.9 C
Bengaluru
Google search engine
LIVE
ಮನೆ#Exclusive NewsTop Newsಬೀದರ್ ಪಾಲಿಕೆ ಮೊದಲ ಸಭೆಯಲ್ಲೇ 'ಟೆಂಪಲ್' ವಾರ್! ಹೈಡ್ರಾಮಾಗೆ ಸಾಕ್ಷಿಯಾದ ಬಿಗ್ ಮೀಟಿಂಗ್!'

ಬೀದರ್ ಪಾಲಿಕೆ ಮೊದಲ ಸಭೆಯಲ್ಲೇ ‘ಟೆಂಪಲ್’ ವಾರ್! ಹೈಡ್ರಾಮಾಗೆ ಸಾಕ್ಷಿಯಾದ ಬಿಗ್ ಮೀಟಿಂಗ್!’

ಬೀದರ್: ಮಹಾನಗರ ಪಾಲಿಕೆಯ ಇತಿಹಾಸದಲ್ಲೇ ಅತ್ಯಂತ ಮಹತ್ವದ್ದಾಗಬೇಕಿದ್ದ ಮೊದಲ ಸಾಮಾನ್ಯ ಸಭೆಯು ಅಭಿವೃದ್ಧಿಯ ಚರ್ಚೆಗಿಂತ ಹೆಚ್ಚಾಗಿ ಹೈಡ್ರಾಮಾ ಮತ್ತು ಗದ್ದಲಕ್ಕೆ ಸಾಕ್ಷಿಯಾಗಿದೆ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಈ ಸಭೆಯು ಆರಂಭವಾಗುತ್ತಿದ್ದಂತೆಯೇ ಓಲ್ಡ್ ಸಿಟಿಯಲ್ಲಿರುವ ಭೋವಿ ಸಮುದಾಯದ ನಿರಂಜನ ಸ್ವಾಮಿ ದೇವಸ್ಥಾನದ ತೆರವು ವಿಷಯವಾಗಿ ರಣರಂಗವಾಗಿ ಮಾರ್ಪಟ್ಟಿತು. ಅಜೆಂಡಾದಲ್ಲಿ 9ನೇ ವಿಷಯವಾಗಿ ದೇವಸ್ಥಾನದ ಜಾಗದ ಒತ್ತುವರಿ ತೆರವು ಪ್ರಸ್ತಾಪಿಸಿದ್ದನ್ನು ಕಂಡ ಬಿಜೆಪಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸಭೆಯ ನಡುವೆಯೇ ಪ್ರತಿಭಟನೆಗೆ ಇಳಿದರು.

ಬಿಜೆಪಿ ಸದಸ್ಯ ಶಶಿಧರ್ ಹೊಸಳ್ಳಿ ನೇತೃತ್ವದಲ್ಲಿ ಸದಸ್ಯರು ಮೇಯರ್ ಮೊಹಮ್ಮದ್ ಗೌಸ್ ಮತ್ತು ಆಯುಕ್ತ ಮುಕುಲ್ ಜೈನ್ ಅವರ ಮೇಜಿನ ಎದುರು ನಿಂತು ಘೋಷಣೆಗಳನ್ನು ಕೂಗಿದರು. ಪವಿತ್ರ ದೇವಸ್ಥಾನದ ವಿಚಾರವನ್ನು ಅಜೆಂಡಾದಲ್ಲಿ ಸೇರಿಸಿದ್ದೇ ತಪ್ಪು ಮತ್ತು ಇದು ಉದ್ದೇಶಪೂರ್ವಕವಾಗಿ ಮಾಡುತ್ತಿರುವ ಕೆಲಸ ಎಂದು ಕಿಡಿಕಾರಿದ ಸದಸ್ಯರು, ತಕ್ಷಣವೇ ಈ ಪ್ರಸ್ತಾವನೆಯನ್ನು ಕೈಬಿಡಬೇಕೆಂದು ಪಟ್ಟು ಹಿಡಿದರು. ಈ ವೇಳೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಸಭೆಯಲ್ಲಿ ಭಾರೀ ಗೊಂದಲ ನಿರ್ಮಾಣವಾಯಿತು.

ದೇವಸ್ಥಾನದ ವಿವಾದದ ಜೊತೆಗೆ ಪಾಲಿಕೆಯ ಅಧಿಕೃತ ಫಲಕಗಳಲ್ಲಿ ಉರ್ದು ಭಾಷೆ ಬಳಸುವ ಪ್ರಸ್ತಾವನೆಗೂ ಬಿಜೆಪಿ ಸದಸ್ಯರು ಬಲವಾದ ಆಕ್ಷೇಪ ವ್ಯಕ್ತಪಡಿಸಿದರು. ಒತ್ತುವರಿ ತೆರವು ಮಾಡುವುದು ಸಾಮಾನ್ಯ ಪ್ರಕ್ರಿಯೆ ಮತ್ತು ಕಾನೂನುಬದ್ಧವಾಗಿಯೇ ವಿಷಯ ಮಂಡಿಸಲಾಗಿದೆ ಎಂದು ಅಧಿಕಾರಿಗಳು ಸಮರ್ಥನೆ ನೀಡಲು ಪ್ರಯತ್ನಿಸಿದರೂ, ಸದಸ್ಯರ ಆಕ್ರೋಶದ ಮುಂದೆ ಅದು ಸಾಧ್ಯವಾಗಲಿಲ್ಲ. ಒಟ್ಟಾರೆಯಾಗಿ ನಗರದ ಜನರ ಸಮಸ್ಯೆಗಳನ್ನು ಆಲಿಸಬೇಕಿದ್ದ ಮೊದಲ ಸಭೆಯು ರಾಜಕೀಯ ಕೆಸರೆರಾಟ ಮತ್ತು ಆರೋಪ-ಪ್ರತ್ಯಾರೋಪಗಳ ಅಖಾಡವಾಗಿ ಮಾರ್ಪಟ್ಟಿದ್ದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments