೨೦೧೬ರ ನೋಟು ಅಮಾನ್ಯೀಕರಣದ ಸಮಯದಲ್ಲಿ ಜನರಿಗೆ ಆಸರೆಯಾಗಿ ಬಂದಿದ್ದ ಆ ಗುಲಾಬಿ ಬಣ್ಣದ ೨೦೦೦ ರೂಪಾಯಿ ನೋಟುಗಳು ಈಗ ಇತಿಹಾಸದ ಪುಟ ಸೇರುತ್ತಿವೆ. ಆರ್‌ಬಿಐ ಈ ನೋಟುಗಳ ಮುದ್ರಣವನ್ನು ಈಗಾಗಲೇ ನಿಲ್ಲಿಸಿದ್ದು, ಮಾರುಕಟ್ಟೆಯಲ್ಲಿ ಚಲಾವಣೆ ಬಹುತೇಕ ಶೂನ್ಯಕ್ಕೆ ತಲುಪಿದೆ.

ಇತ್ತೀಚಿನ ಅಪ್‌ಡೇಟ್ ಪ್ರಕಾರ, ಚಲಾವಣೆಯಲ್ಲಿದ್ದ ಶೇ. ೯೮ರಷ್ಟು ನೋಟುಗಳು ಈಗಾಗಲೇ ಆರ್‌ಬಿಐಗೆ ಮರಳಿವೆ. ಪ್ರಸ್ತುತ ಕೇವಲ ೫,೬೬೯ ಕೋಟಿ ರೂಪಾಯಿ ಮೌಲ್ಯದ ನೋಟುಗಳು ಮಾತ್ರ ಸಾರ್ವಜನಿಕರ ಬಳಿ ಉಳಿದಿವೆ ಎಂದು ಅಂದಾಜಿಸಲಾಗಿದೆ.ಮೇ ೨೦೨೩ರಲ್ಲಿ ಆರ್‌ಬಿಐ ‘ಕ್ಲೀನ್ ನೋಟ್’ ನೀತಿಯಡಿ ಈ ನೋಟುಗಳನ್ನು ಹಿಂಪಡೆಯುವ ನಿರ್ಧಾರ ಪ್ರಕಟಿಸಿತ್ತು. ಅಕ್ಟೋಬರ್ ೭, ೨೦೨೩ರ ನಂತರ ಸಾಮಾನ್ಯ ಬ್ಯಾಂಕ್‌ಗಳಲ್ಲಿ ಇವುಗಳ ವಿನಿಮಯವನ್ನು ಸ್ಥಗಿತಗೊಳಿಸಲಾಗಿದೆ.

ಗಾಬರಿಪಡುವ ಅಗತ್ಯವಿಲ್ಲ, ಈ ನೋಟುಗಳು ೨೦೨೬ರವರೆಗೆ ಕಾನೂನುಬದ್ಧವಾಗಿ ಮಾನ್ಯವಾಗಿರುತ್ತವೆ ಆದರೆ, ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಇವುಗಳನ್ನು ಸ್ವೀಕರಿಸುತ್ತಿಲ್ಲವಾದ್ದರಿಂದ ಇವುಗಳ ಪ್ರಾಯೋಗಿಕ ಬಳಕೆ ಈಗ ಅಸಾಧ್ಯವಾಗಿದೆ.ನಿಮ್ಮ ಬಳಿ ಇನ್ನೂ ೨೦೦೦ ರೂಪಾಯಿ ನೋಟುಗಳು ಉಳಿದಿದ್ದರೆ, ಅವುಗಳನ್ನು ಬದಲಿಸಿಕೊಳ್ಳಲು ಈಗಲೂ ಅವಕಾಶವಿದೆ. ದೇಶದ ೧೯ ಆಯ್ದ ಆರ್‌ಬಿಐ ಕಚೇರಿಗಳಲ್ಲಿ ನೀವು ಈ ನೋಟುಗಳನ್ನು ನೀಡಿ ವಿನಿಮಯ ಮಾಡಿಕೊಳ್ಳಬಹುದು ಅಥವಾ ನಿಮ್ಮ ಖಾತೆಗೆ ಠೇವಣಿ ಮಾಡಬಹುದು. ನಿಮ್ಮ ಹಳೆಯ ಪರ್ಸ್ ಅಥವಾ ಬೀರುಗಳಲ್ಲಿ ಇಂತಹ ನೋಟುಗಳಿದ್ದರೆ, ಮುಂದೆ ಸಮಸ್ಯೆ ಎದುರಿಸುವ ಬದಲು ಈಗಲೇ ಆರ್ ಬಿಐ ಕಚೇರಿಗೆ ಭೇಟಿ ನೀಡುವುದು ಉತ್ತಮ.


