ಬೆಂಗಳೂರು: ಜನತೆಗೆ ಒಂದರ ಮೇಲೊಂದು ಆರ್ಥಿಕ ಹೊಡೆತ ಬೀಳುತ್ತಿದೆ. ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಯ ಬೆನ್ನಲ್ಲೇ, ಈಗ ಕಾವೇರಿ ನೀರಿನ ದರವೂ ಏರಿಕೆಯಾಗಲು ಕ್ಷಣಗಣನೆ ಆರಂಭವಾಗಿದೆ.
ಆಡಳಿತ ಸುಧಾರಣಾ ಸಮಿತಿಯ ಶಿಫಾರಸಿನಂತೆ ಪ್ರತಿ ವರ್ಷ ನೀರಿನ ದರವನ್ನು ಪರಿಷ್ಕರಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮುಂದಾಗಿದ್ದು, ಏಪ್ರಿಲ್ 1 ರಿಂದ ಶೇ. 3 ರಷ್ಟು ದರ ಹೆಚ್ಚಳವಾಗುವ ಸಾಧ್ಯತೆಯಿದೆ.
ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಪ್ರತಿ ವರ್ಷ ನೀರಿನ ದರ ಏರಿಕೆ ಮಾಡಬೇಕು ಎಂಬ ನಿಯಮದ ಅನ್ವಯ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ ವರ್ಷವಷ್ಟೇ ಗೃಹ ಬಳಕೆಯ ದರದಲ್ಲಿ ಲೀಟರ್ಗೆ ಗರಿಷ್ಠ 1 ಪೈಸೆಯವರೆಗೆ ಮತ್ತು ವಾಣಿಜ್ಯ ಬಳಕೆಗೆ ಗರಿಷ್ಠ 1.90 ಪೈಸೆಯವರೆಗೆ ಏರಿಕೆ ಮಾಡಲಾಗಿತ್ತು. ಈಗ ಮತ್ತೆ ದರ ಏರಿಕೆಯ ಪ್ರಸ್ತಾಪ ಇರುವುದರಿಂದ ಜನಸಾಮಾನ್ಯರ ಮಾಸಿಕ ಬಜೆಟ್ ಮೇಲೆ ನೇರ ಪರಿಣಾಮ ಬೀರಲಿದೆ.


