Freedom TV

ಮೈಸೂರಿನಲ್ಲಿ ರಫ್ತು ಮತ್ತು ಆಮದು ಸೇವೆಗೆ ಕಂಟೈನರ್‌ ಡಿಪೋ ನಿರ್ಮಾಣ ಕಾರ್ಯ ಪೂರ್ಣ

ಮೈಸೂರು ; ಮೈಸೂರಿನಲ್ಲಿ ರಫ್ತು ಮತ್ತು ಆಮದು ಸಾಗಣೆಗೆ ಅನುಕೂಲವಾಗುವ ಇನ್‌ಲ್ಯಾಂಡ್‌ ಕಂಟೈನರ್‌ ಡಿಪೋ ಬರಬೇಕೆಂಬುದು ಕೈಗಾರಿಕೋದ್ಯಮಿಗಳ ಬಹುದಿನಗಳ ಬೇಡಿಕೆ ಆಗಿತ್ತು. ಆದರೆ ಈಗ ಅಂದುಕೊಂಡಂತೆ ಮೈಸೂರಿನಲ್ಲಿ ನಿರ್ಮಾಣವಾಗಿರುವ ಇನ್‌ಲ್ಯಾಂಡ್‌ ಕಂಟೈನರ್‌ ಡಿಪೋ’ ಸೇವೆಗೆ ಸಿದ್ಧಗೊಂಡಿದ್ದು, ಶೀಘ್ರವೇ ರೈಲ್ವೆ ಸಚಿವರಿಂದ ಉದ್ಘಾಟನೆಗೊಳ್ಳಲಿದೆ.

ಮೈಸೂರು ತಾಲ್ಲೂಕಿನ ಕಡಕೊಳದಲ್ಲಿ ಇನ್ ಲ್ಯಾಂಡ್ ಕಂಟೈನರ್ ಡಿಪೋ ನಿರ್ಮಿಸಲಾಗಿದೆ. ಭಾರಿ ಪ್ರಮಾಣದ ಕೈಗಾರಿಕೋತ್ಪನ್ನಗಳನ್ನು ಬಂದರಿಗೆ ಸಾಗಿಸಲು ಹಾಗೂ ತರಿಸಿಕೊಳ್ಳಲು ದಶಕದ ಹಿಂದೆಯೇ ರೈಲು ಆಧಾರಿತ ಸರಕು ಸಾಗಣೆ ವ್ಯವಸ್ಥೆ ಬೇಕೆಂಬ ಕೂಗು ಎದ್ದಿತ್ತು. 2013 ರಲ್ಲಿ ಆರ್‌.ವಿ. ದೇಶಪಾಂಡೆ ಕೈಗಾರಿಕಾ ಸಚಿವರಾಗಿದ್ದಾಗ ಇದಕ್ಕೆ ಸಾತ್ವಿಕ ಒಪ್ಪಿಗೆ ಕೂಡ ಸಿಕ್ಕಿತ್ತು.

ನಾನಾ ಸಮಸ್ಯೆಗಳಿಂದ ಯೋಜನೆ ನನೆಗುದಿಗೆ ಬಿದ್ದಿತ್ತು. ಬಳಿಕ 62 ಎಕರೆ ಜಾಗದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಕಂಟೈನರ್‌ ಡಿಪೋ ಕಾಮಗಾರಿ ಪ್ರಾರಂಭವಾಯಿತು. ಕೇಂದ್ರ ಸರಕಾರದ ಭಾರತೀಯ ಕಂಟೈನರ್‌ ನಿಗಮ (ಸಿಒಎನ್‌ಸಿಒಆರ್‌) ವತಿಯಿಂದ ಬೆಂಗಳೂರು ನಂತರ ರಾಜ್ಯದಲ್ಲಿ ಸ್ಥಾಪನೆಯಾದ ಎರಡನೇ ಕಂಟೈನರ್‌ ಡಿಪೋ ಇದಾಗಿದೆ.

ಈಗಾಗಲೇ ಶೇ.95 ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ಹಾಗಾಗಿ ರೈಲ್ವೆ ಸಚಿವರ ದಿನಾಂಕ ಸಿಗುತ್ತಿದ್ದಂತೆ ಉದ್ಘಾಟನೆ ನೆರವೇರಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಹಾಲಿ ಕೈಗಾರಿಕೆ ಹಾಗೂ ಕಾರ್ಖಾನೆಗಳು ಸರಕುಗಳನ್ನು ರಸ್ತೆ ಸಾರಿಗೆ ಮುಖಾಂತರ ಸಾಗಿಸುತ್ತಿದ್ದವು. ಇದೀಗ ಕಂಟೈನರ್‌ ಡಿಪೋ ಬಂದಿರುವುದರಿಂದ ರೈಲಿನ ಮೂಲಕ ವಸ್ತುಗಳನ್ನು ಸಾಗಿಸಿದರೆ ಶೇ.30 ರಷ್ಟು ಸಾಗಣೆ ವೆಚ್ಚ ತಗ್ಗುತ್ತದೆ. ಸಮಯವೂ ಉಳಿತಾಯವಾಗಲಿದೆ.

ಇದು ಮಂಡ್ಯ, ಹಾಸನ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳ ರಫ್ತುದಾರರಿಗೆ ಬೆಂಗಳೂರಿನ ವೈಟ್‌ಫೀಲ್ಡ್‌ಗಿಂತ ಹೆಚ್ಚು ಅನುಕೂಲಕರವಾಗಲಿದೆ. ಅಲ್ಲದೆ, ಕಂಟೈನರ್‌ 10 ಸಾವಿರ ಚದರ ಅಡಿ ವಿಸ್ತೀರ್ಣದ ಗೋದಾಮನ್ನು ಒಳಗೊಂಡಿದೆ.

Comments (0)

Your email address will not be published. Required fields are marked *

Back to top button