ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಡ್ರಗ್ಸ್ ಜಾಲ ಭೇದಿಸಿದ ಮಂಗಳೂರು ಸಿಸಿಬಿ ಪೋಲಿಸ್; ಸಿಎಂ ಶ್ಲಾಘನೆ

ಕರ್ನಾಟಕದ ಇತಿಹಾಸದಲ್ಲೇ ಅತಿ ದೊಡ್ಡ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡಿರುವ ಮಂಗಳೂರು ಸಿಸಿಬಿ ಪೋಲಿಸರ ಕಾರ್ಯವೈಖರಿಯ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ ಪ್ರಶಂಸಿದ್ದಾರೆ.
ದಕ್ಷಿಣ ಆಫ್ರಿಕಾದ ಬಾಂಬಾ ಫಾಂಟ (31) ಮತ್ತು ಅಬಿಗೈಲ್ ಅಡೋನಿಸ್ (30) ಬಂಧಿತರು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದಲ್ಲಿ ಇವರನ್ನು ಬಂಧಿಸಲಾಗಿದೆ. ಇನ್ನು ಇವರು ತಮ್ಮೊಂದಿಗೆ ತಂದಿದ್ದ ಟ್ರಾಲಿ ಬ್ಯಾಗ್ನಲ್ಲಿ 75 ಕೋಟಿ ರೂಪಾಯಿ ಮೌಲ್ಯದ 37.878 ಕೆಜಿ ತೂಕದ ಎಂಡಿಎಂಎ ಡ್ರಗ್ಸ್ ಪತ್ತೆಯಾಗಿದೆ. ಜೊತೆಗೆ ನಾಲ್ಕು ಮೊಬೈಲ್ ಫೋನ್ಗಳು, ಪಾಸ್ಪೋರ್ಟ್, 18 ಸಾವಿರ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು ಪೋಲಿಸರ ಕಾರ್ಯವೈಖರಿಗೆ ಸಿಎಂ ಪ್ರಶಂಸೆ

ಸಿಎಂ ಟ್ವೀಟ್ ಹೀಗಿದೆ; “ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಪ್ರಮಾಣದ ಮಾದಕ ದ್ರವ್ಯವನ್ನು ಪತ್ತೆಹಚ್ಚಿ, ಇಬ್ಬರು ಆರೋಪಿಗಳನ್ನು ಬಂಧಿಸಿರುವ ಮಂಗಳೂರು ಸಿಟಿ ಪೊಲೀಸರ ಕಾರ್ಯಾಚರಣೆ ಶ್ಲಾಘನೀಯ. ಸುಮಾರು ₹75 ಕೋಟಿಗೂ ಅಧಿಕ ಮೌಲ್ಯದ 37 ಕೆ.ಜಿ ಎಂಡಿಎಂಎ ಮಾದಕ ದ್ರವ್ಯವನ್ನು ವಶಕ್ಕೆ ಪಡೆದು, ಸಾವಿರಾರು ಯುವ ಜನರ ಬದುಕಿಗೆ ಎದುರಾಗಲಿದ್ದ ಬಹುದೊಡ್ಡ ಅಪಾಯವೊಂದನ್ನು ನಮ್ಮ ಪೊಲೀಸರು ನಿವಾರಿಸಿದ್ದಾರೆ.
ನಾವು ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಮಾದಕದ್ರವ್ಯ ವ್ಯಸನಮುಕ್ತ ಸಮಾಜ ನಿರ್ಮಾಣದ ಪಣತೊಟ್ಟು, ಡ್ರಗ್ಸ್ ಮಾರಾಟ ಮತ್ತು ಸೇವನೆಯ ವಿರುದ್ಧ ಸಮರ ಸಾರಿದ್ದೇವೆ. ಕೆಲವು ತಿಂಗಳುಗಳ ಹಿಂದೆ ನಾನು ಮಂಗಳೂರಿಗೆ ಭೇಟಿನೀಡಿದ್ದ ವೇಳೆ ಜಿಲ್ಲೆಯಲ್ಲಿ ಡ್ರಗ್ಸ್ ಹಾವಳಿ ತಡೆಗಟ್ಟಿ ಸ್ವಸ್ಥ ಪರಿಸರ ಕಟ್ಟಿಕೊಡುವ ವಾಗ್ದಾನವನ್ನು ಜಿಲ್ಲೆಯ ಜನರಿಗೆ ನೀಡಿದ್ದೆ. ನಮ್ಮ ಈ ಪ್ರಯತ್ನದ ಭಾಗವಾಗಿ ಈಗ ಬಹುದೊಡ್ಡ ಡ್ರಗ್ಸ್ ಜಾಲವೊಂದನ್ನು ಪತ್ತೆ ಮಾಡಲಾಗಿದೆ. ರಾಜ್ಯಾದ್ಯಂತ ಹಬ್ಬಿರುವ ಡ್ರಗ್ಸ್ ಜಾಲವನ್ನು ಬೇರುಸಹಿತ ಕಿತ್ತೊಗೆಯುವುದು ನಮ್ಮ ಸರ್ಕಾರದ ಗುರಿಯಾಗಿದೆ.” ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.



