Top Newsಸುದ್ದಿ

ಒಂದು ಲಕ್ಷಕ್ಕೂ ಅಧಿಕ ಬಾಂಗ್ಲಾ ಅಕ್ರಮವಾಗಿ ನೆಲೆಸಿರುವ ವಲಸಿಗರು?

ಉಡುಪಿ: ಮಲ್ಪೆಯಲ್ಲಿ ಸೆರೆಯಾಗಿರುವ ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿಚಾರಣೆಯ ವೇಳೆ ಅಕ್ರಮ ವಲಸೆಯ ಸ್ಫೋಟಕ ಮಾಹಿತಿಗಳು ಒಂದೊಂದಾಗಿ ಹೊರಬೀಳುತ್ತಿವೆ. ಬಾಂಗ್ಲಾದಿಂದ ಕಳೆದ 3ರಿಂದ 5 ವರ್ಷಗಳ ಅವಧಿಯಲ್ಲಿ ಸುಮಾರು 25 ಸಾವಿರ ಮಂದಿ ಬಂದಿರುವುದಾಗಿ ಆರೋಪಿಗಳ ಪೈಕಿ ಒಬ್ಬಾತ ಬಾಯಿಬಿಟ್ಟಿದ್ದಾನೆ. ಒಟ್ಟಾರೆಯಾಗಿ ರಾಜ್ಯದಲ್ಲಿ ನೆಲೆಸಿರುವ ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ ಲಕ್ಷಕ್ಕೂ ಅಧಿಕ ಇರಬಹುದು ಎನ್ನುತ್ತವೆ ಪೊಲೀಸ್ ಮೂಲಗಳು.

ಪಶ್ಚಿಮಬಂಗಾಳ, ಅಸ್ಸಾಂ, ತ್ರಿಪುರಾ, ಮೇಘಾಲಯ, ಮಿಜೋರಾಂ ಮೂಲಕ ಗುಂಪಾಗಿ ಭಾರತಕ್ಕೆ ಬರುವ ಜಾಲವಿದೆ. ನುಸುಳುಕೋರರಿಗೆ ಗಡಿ ಭಾಗದಲ್ಲಿಯೇ ನಕಲಿ ದಾಖಲೆಗಳು ಸಿದ್ದವಾಗಿರುತ್ತವೆ. ಅಲ್ಲಿಂದ ಬೇರೆ ಬೇರೆ ಕಡೆಗೆ ಅದೇ ದಾಖಲೆ ಉಪಯೋಗಿಸಿ ತೆರಳುತ್ತಾರೆ. ಹೀಗೆ ಸುಮಾರು 3-5 ವರ್ಷಗಳ ಅವಧಿಯಲ್ಲಿ ಬೇರೆ ಬೇರೆ ರಾಜ್ಯಗಳ ಮೂಲಕ ಪ್ರತ್ಯೇಕ ತಂಡಗಳಾಗಿ ಕನಿಷ್ಠ 25 ಸಾವಿರ ಅಕ್ರಮ ನುಸುಳುಕೋರರು ಕರ್ನಾಟಕಕ್ಕೆ ಬಂದಿದ್ದಾರೆ. ಇವರಲ್ಲಿ ಶಿವಮೊಗ್ಗ, ಉಡುಪಿ, ದ.ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಯಾಗಿದ್ದಾರೆಂದು ಆರೋಪಿ ಮಾಹಿತಿ ನೀಡಿರುವ ಬಗ್ಗೆ ಪೊಲೀಸ್ ಮೂಲಗಳು ತಿಳಿಸಿವೆ.

ಉಡುಪಿಯಲ್ಲಿ ಎರಡು ದಿನಗಳ ಹಿಂದೆ ಬಂಧನವಾಗಿರುವ ಬಾಂಗ್ಲಾ ಅಕ್ರಮ ವಲಸಿಗರು ಈ ವಿಷಯವನ್ನು ಪೊಲೀಸರ ಮುಂದೆ ಬಾಯ್ದಿಟ್ಟಿದ್ದಾರೆ. ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ನೆಲೆ ಕಂಡಿರುವ ಅಕ್ರಮ ನುಸುಳುಕೋರರನ್ನು ಪತ್ತೆ ಹಚ್ಚುವುದು ಪೊಲೀಸರ ಮುಂದಿರುವ ದೊಡ್ಡ ಸವಾಲು. ವರ್ಷಗಳ ಹಿಂದೆಯೇ ಬಂದಿರುವ ಕೆಲವರು ಕನ್ನಡವನ್ನು ಚೆನ್ನಾಗಿ ಕಲಿತು ಇಲ್ಲಿಯವರೊಂದಿಗೆ ಬೆರೆತು ಹೋಗಿದ್ದಾರೆ. ಆಸ್ತಿ, ಮನೆ ಖರೀದಿ ಮಾಡಿದವರೂ ಇದ್ದಾರೆ. ಇವರು ಭಾರತದ ಆಧಾರ್ ಕಾರ್ಡ್ ಚುನಾವಣಾ ಗುರುತು ಚೀಟಿಯಂತಹ ದಾಖಲೆಗಳನ್ನೂ ಹೊಂದಿದ್ದಾರೆ ಎನ್ನುತ್ತವೆ ಮೂಲಗಳು. ಈ ಬಗ್ಗೆ ಗುಪ್ತಚರ ಇಲಾಖೆಯಲ್ಲಿಯೂ ನಿಖರ ಮಾಹಿತಿ ಲಭ್ಯವಿಲ್ಲ. ಸ್ಥಳೀಯ ಠಾಣೆಗಳು ಈ ಬಗ್ಗೆ ಮತ್ತಷ್ಟು ಕಾಯೋನ್ಮುಖವಾದರಷ್ಟೇ ಇಂತಹ ಅಕ್ರಮ ವಲಸಿಗರನ್ನು ಪತ್ತೆಹಚ್ಚಲು ಸಾಧ್ಯವಿದೆ ಎನ್ನುತ್ತಾರೆ ನಿವೃತ್ತ ಪೊಲೀಸರೊಬ್ಬರು.

ಸೂಕ್ತ ಪರಿಶೀಲನೆ ಅಗತ್ಯ

ಅನ್ಯ ರಾಜ್ಯಗಳಿಂದ ಕಾರ್ಮಿಕರನ್ನು ಕರೆತರುವ ಬೋಕರ್‌ಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ. ಮಲ್ಪೆಯಲ್ಲಿ ನಡೆದ ಘಟನೆಯ ಬಳಿಕ ಪೊಲೀಸರು ಇದುವರೆಗೆ ಕೇವಲ 8ರಿಂದ 10 ಮಂದಿಯನ್ನು ಮಾತ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇದೇ ರೀತಿ ಇನ್ನು ಎಷ್ಟು ಮಂದಿ ಕಾರ್ಮಿಕರು ಇದ್ದಾರೆ ಎಂಬುದನ್ನು ಪತ್ತೆ ಹಚ್ಚುವ ಕೆಲಸವೂ ಆಗಬೇಕಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇಂದು ಪೊಲೀಸ್ ಕಸ್ಟಡಿಗೆ:ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆಗಳನ್ನು ಸೋಮವಾರ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ.

Comments (0)

Your email address will not be published. Required fields are marked *

Back to top button