Top Newsಸುದ್ದಿ

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ವಿರುದ್ಧ FIR ದಾಖಲು – ಕಟೀಲ್‌ ಎ4, ವಿಜಯೇಂದ್ರ ಎ5

ಬೆಂಗಳೂರು: ಅಧಿಕಾರ ದುರುಪಯೋಗ ಪಡಿಸಿಕೊಂಡು ಚುನಾವಣಾ ಬಾಂಡ್‌ ಪಡೆದ ಆರೋಪದ ಮೇಲೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಚುನಾವಣಾ ಬಾಂಡ್ ಮೂಲಕ 8 ಸಾವಿರ ಕೋಟಿ ರೂ. ಸುಲಿಗೆ ಮಾಡುವ ಮೂಲಕ ಅಕ್ರಮ ಎಸಗಿದ್ದಾರೆ ಎನ್ನುವ ಆರೋಪದ ಮೇಲೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ ಕೆಲವರ ವಿರುದ್ಧ ದೂರುದಾರ ಜನಾಧಿಕಾರ ಸಂಘರ್ಷ ಪರಿಷತ್ (ಜೆಎಸ್‌ಪಿ)ನ ಆದರ್ಶ ಆರ್. ಅಯ್ಯರ್ ಎಂಬವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್​, ಎಫ್ಐಆರ್ ದಾಖಲಿಸುವಂತೆ ತಿಲಕ್ ನಗರ ಪೊಲೀಸರಿಗೆ ಶುಕ್ರವಾರ ಸೂಚನೆ ನೀಡಿತ್ತು.

ಆರೋಪ ಸಂಬಂಧ ನಿರ್ಮಲಾ ಸೀತಾರಾಮನ್ ವಿರುದ್ಧ ಅಪರಾಧಿಕ ಒಳಸಂಚು, ಸುಲಿಗೆಯಡಿ ಎಫ್ಐಆರ್ ದಾಖಲಾಗಿದೆ. ಅಲ್ಲದೇ, ಹಿಂದಿನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

ಒಟ್ಟು ಐವರ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಸೀತಾರಾಮನ್ ಅವರು ಎ1 ಆರೋಪಿಯಾಗಿದ್ದಾರೆ. ಇಡಿ ಅಧಿಕಾರಿಗಳು ಎ2, ಕೇಂದ್ರ ಬಿಜೆಪಿ ಪದಾಧಿಕಾರಿಗಳು ಎ3, ನಳಿನ್‌ ಕುಮಾರ್‌ ಕಟೀಲ್‌ ಎ4, ಬಿ.ವೈ.ವಿಜಯೇಂದ್ರ ಎ5, ರಾಜ್ಯ ಬಿಜೆಪಿ ಪದಾಧಿಕಾರಿಗಳು ಎ6 ಆರೋಪಿಗಳಾಗಿದ್ದಾರೆ. ಐಪಿಸಿ ಸೆಕ್ಷನ್‌ 384 (ಸುಲಿಗೆ), 120b (ಅಪರಾಧಿಕ ಒಳಸಂಚು), 34 (ಸಮಾನ ಉದ್ದೇಶ) ಮೇಲೆ ಕೇಸ್‌ ದಾಖಲಾಗಿದೆ.

Comments (0)

Your email address will not be published. Required fields are marked *

Back to top button