Freedom TVwest bengalದೇಶ/ವಿದೇಶ

ಪಶ್ಚಿಮ ಬಂಗಾಳದ ಸಿಎಂ ಆದ ಸುವೇಂದು ಅಧಿಕಾರಿ

ಬಂಗಾಳದಲ್ಲಿ ಬಿಜೆಪಿ ಯುಗ ಶುರು!

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಇಂದು ಐತಿಹಾಸಿಕ ದಿನ. ಕೋಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ರಾಜ್ಯದಲ್ಲಿ ಸಿಎಂ ಗದ್ದುಗೆ ಏರಿದ ಬಿಜೆಪಿಯ ಮೊದಲ ನಾಯಕ ಎಂಬ ಹರಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಗಣ್ಯರ ಸಮ್ಮುಖದಲ್ಲಿ ಪ್ರಮಾಣ ವಚನ:
ರಾಜ್ಯಪಾಲರಾದ ಆರ್‌.ಎನ್. ರವಿ ಅವರು ಸುವೇಂದು ಅಧಿಕಾರಿಯವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಆಗಮಿಸಿದ್ದರು.ಸುವೇಂದು ಅಧಿಕಾರಿ ಅವರೊಂದಿಗೆ ಪ್ರಮುಖ ನಾಯಕರಾದ ದಿಲೀಪ್ ಘೋಷ್, ಅಗ್ನಿಮಿತ್ರ ಪಾಲ್, ಅಶೋಕ್ ಕೀರ್ತಾನಿಯಾ, ಕ್ಷುದಿರಾಮ್ ತುಡು ಮತ್ತು ನಿಶಿತ್ ಪ್ರಾಮಾಣಿಕ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಟ್ಯಾಗೋರ್ ಜಯಂತಿಯ ಶುಭ ದಿನ
ಇಂದು ವಿಶ್ವಕವಿ ರವೀಂದ್ರನಾಥ್ ಟ್ಯಾಗೋರ್ ಅವರ 165ನೇ ಜಯಂತಿ. ಪ್ರಧಾನಿ ಮೋದಿ ಅವರು ವೇದಿಕೆಯಲ್ಲಿ ಟ್ಯಾಗೋರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು. ಹಿರಿಯ ಬಿಜೆಪಿ ಕಾರ್ಯಕರ್ತ ಮಖನ್ಲಾಲ್ ಸರ್ಕಾರ್ ಅವರ ಆಶೀರ್ವಾದ ಪಡೆದ ಮೋದಿ, ಬಂಗಾಳದ ಜನತೆಗೆ ಹೊಸ ಆಡಳಿತದ ಭರವಸೆ ನೀಡಿದರು.
ಕೇಸರಿಮಯವಾದ ಕೋಲ್ಕತ್ತಾ
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆಲ್ಲುವ ಮೂಲಕ ಭಾರೀ ಬಹುಮತ ಸಾಧಿಸಿತ್ತು. ಈ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಲು ಲಕ್ಷಾಂತರ ಬಿಜೆಪಿ ಬೆಂಬಲಿಗರು ಬ್ರಿಗೇಡ್ ಮೈದಾನಕ್ಕೆ ಹರಿದು ಬಂದಿದ್ದರು. ‘ಜೈ ಶ್ರೀ ರಾಮ್’ ಘೋಷಣೆಗಳು ಮತ್ತು ಕೇಸರಿ ಧ್ವಜಗಳ ನಡುವೆ ಇಡೀ ನಗರವು ಹಬ್ಬದ ವಾತಾವರಣದಲ್ಲಿ ಮುಳುಗಿತ್ತು.

ವಿಶೇಷ ಗಣ್ಯರ ಹಾಜರಿ:
ಕಾರ್ಯಕ್ರಮದಲ್ಲಿ ಎನ್‌ಡಿಎ ಮೈತ್ರಿಕೂಟದ ಪ್ರಮುಖ ನಾಯಕರಾದ ಚಂದ್ರಬಾಬು ನಾಯ್ಡು (ಆಂಧ್ರಪ್ರದೇಶ ಸಿಎಂ), ಭೂಪೇಂದ್ರ ಪಟೇಲ್ (ಗುಜರಾತ್ ಸಿಎಂ), ಪುಷ್ಕರ್ ಸಿಂಗ್ ಧಾಮಿ (ಉತ್ತರಾಖಂಡ ಸಿಎಂ) ಮತ್ತು ದೆಹಲಿ ಸಿಎಂ ರೇಖಾ ಗುಪ್ತಾ ಅವರು ಭಾಗವಹಿಸಿ ನೂತನ ಸರ್ಕಾರಕ್ಕೆ ಶುಭ ಹಾರೈಸಿದರು.

#FreedomTV #WestBengal #SuvenduAdhikari #BJP #NarendraModi #Kolkata #PoliticalHistory #NewCM #BengalElection2026

Comments (0)

Your email address will not be published. Required fields are marked *

Back to top button