ಜಿಲ್ಲೆಸುದ್ದಿ

ಚಿಂತಾಮಣಿಯಲ್ಲಿ 70 ವರ್ಷದ ವೃದ್ಧೆಯ ನಿಗೂಢ ಸಾವು.. !

ಚಿಂತಾಮಣಿ: ಕಲ್ಲಪಲ್ಲಿ ಗ್ರಾಮದಲ್ಲಿ ಐದು ದಿನಗಳಿಂದ ನಾಪತ್ತೆಯಾಗಿದ್ದ ವೃದ್ಧೆಯೊಬ್ಬರ ಶವ ಕೆರೆಯಲ್ಲಿ ಪತ್ತೆಯಾಗಿದ್ದು, ಇಡೀ ಗ್ರಾಮದಲ್ಲಿ ಆತಂಕ ಹಾಗೂ ನಿಗೂಢತೆ ಮನೆಮಾಡಿದೆ. ಮೃತ ಮಹಿಳೆಯನ್ನು ಕಲ್ಲಪಲ್ಲಿ ನಿವಾಸಿ ಮುನ್ನಿಲಕ್ಷ್ಮಮ್ಮ (70) ಎಂದು ಗುರುತಿಸಲಾಗಿದೆ. ಐದು ದಿನಗಳ ಹಿಂದೆ ಮನೆಯಿಂದ ಹೋದವರು ಮರಳಿ ಬಾರದಿದ್ದಾಗ ಕುಟುಂಬಸ್ಥರು ಗಾಬರಿಗೊಂಡು ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು. ಇಂದು ಈ ಸಂಬಂಧ ಪೊಲೀಸ್ ದೂರು ನೀಡಲು ಕುಟುಂಬದವರು ಸಿದ್ಧತೆ ನಡೆಸುತ್ತಿದ್ದಾಗಲೇ, ಗ್ರಾಮದ ದೊಡ್ಡ ಕೆರೆಯಲ್ಲಿ ಶವ ತೇಲುತ್ತಿರುವ ಕಹಿ ಸುದ್ದಿ ಹೊರಬಂದಿದೆ.

ಸುಮಾರು 20 ಅಡಿ ಆಳವಿರುವ ಈ ಕೆರೆಯಲ್ಲಿ ವೃದ್ಧೆಯ ಶವ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಘಟನಾ ಸ್ಥಳಕ್ಕೆ ಚಿಂತಾಮಣಿ ನಗರ ಮತ್ತು ಗ್ರಾಮಾಂತರ ಪೊಲೀಸರು ಹಾಗೂ ಡಿವೈಎಸ್‌ಪಿ ಮುರಳೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೃದ್ಧೆಯು ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆಯೇ ಅಥವಾ ಇದರ ಹಿಂದೆ ಯಾವುದಾದರೂ ಕೊಲೆ ಸಂಚು ಅಡಗಿದೆಯೇ ಎಂಬ ಪ್ರಶ್ನೆಗಳು ಕಾಡುತ್ತಿವೆ. ಪೊಲೀಸರು ಸದ್ಯಕ್ಕೆ ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿನ ನಿಖರ ಕಾರಣ ತಿಳಿಯಲಿದೆ.

Comments (0)

Your email address will not be published. Required fields are marked *

Back to top button