Top Newsರಾಜಕೀಯರಾಜ್ಯಸುದ್ದಿ

ಖಮೇನಿ ಪರ ಪ್ರತಿಭಟಿಸುವವರ ನಿಷ್ಠೆ ಎಲ್ಲಿದೆ ಎಂದು ಪ್ರಶ್ನಿಸಿದ ಸುನಿಲ್ ಕುಮಾರ್!

ಉಡುಪಿ: ಇರಾನ್ ಸರ್ವಾಧಿಕಾರಿ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರದ್ಧಾಂಜಲಿ ಅರ್ಪಿಸಿರುವ ವಿಚಾರವಾಗಿ ಉಡುಪಿಯಲ್ಲಿ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ಭಾರತ ಸರ್ಕಾರದ ವಿದೇಶಾಂಗ ನೀತಿಯನ್ನು ಗಮನಿಸದೆ ಏಕಾಏಕಿ ಶೋಕ ವ್ಯಕ್ತಪಡಿಸಿರುವುದು ವಿದೇಶಾಂಗ ನೀತಿಗೆ ಮಾಡಿದ ಅಪಮಾನ ಎಂದು ಕಿಡಿಕಾರಿದ್ದಾರೆ. ಕೇವಲ ರಾಜ್ಯದ ವೋಟ್ ಬ್ಯಾಂಕ್ ರಾಜಕಾರಣವನ್ನು ಕಣ್ಮುಂದೆ ಇಟ್ಟುಕೊಂಡು ಮುಖ್ಯಮಂತ್ರಿಗಳು ಈ ರೀತಿಯ ನಿಲುವು ತಳೆದಿರುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ಜಗತ್ತಿನಾದ್ಯಂತ ಖಮೇನಿ ಹತ್ಯೆಯನ್ನು ಹಲವರು ಸಂಭ್ರಮಿಸುತ್ತಿದ್ದು, ಒಬ್ಬ ಕ್ರೂರ ಸರ್ವಾಧಿಕಾರಿಯ ಅಂತ್ಯವಾಯಿತು ಎಂದು ಜನರು ಭಾವಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿ ಒಂದು ಸಮುದಾಯದವರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿರುವುದು ಮತ್ತು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುತ್ತಿರುವುದು ಗಂಭೀರ ಸಂಗತಿಯಾಗಿದೆ. ಈ ಹಿಂದೆ ಪೆಹಲ್ಗಾಮ್ ದಾಳಿ ನಡೆದಾಗ ಅಥವಾ ಬಾಂಗ್ಲಾದೇಶದಲ್ಲಿ ಹಿಂದೂಗಳ ನರಮೇಧ ನಡೆದಾಗ ಪ್ರತಿಭಟಿಸದ ಇವರು, ಈಗ ಪರದೇಶದ ನಾಯಕನಿಗಾಗಿ ರಸ್ತೆಗಿಳಿದಿರುವುದು ಅವರ ನಿಷ್ಠೆ ಎಲ್ಲಿದೆ ಎಂಬ ಪ್ರಶ್ನೆಯನ್ನು ಮೂಡಿಸುತ್ತದೆ ಎಂದು ಸುನಿಲ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಮಧ್ಯಪ್ರಾಚ್ಯ ರಾಷ್ಟ್ರಗಳೊಂದಿಗೆ ಭಾರತವು ಉತ್ತಮ ವ್ಯಾಪಾರ ಮತ್ತು ರಾಜತಾಂತ್ರಿಕ ಸಂಬಂಧವನ್ನು ಹೊಂದಿದ್ದು, ಇಂತಹ ಸೂಕ್ಷ್ಮ ಸಮಯದಲ್ಲಿ ರಾಜ್ಯದ ನಾಯಕರು ಎಚ್ಚರಿಕೆಯ ಹೆಜ್ಜೆ ಇರಿಸಬೇಕಿತ್ತು. ಎಲ್ಲರ ನಿಷ್ಠೆ ಭಾರತ ದೇಶಕ್ಕೆ ಇರಬೇಕೇ ಹೊರತು, ಬೇರೆ ದೇಶದ ವಿದ್ಯಮಾನಗಳಿಗಾಗಿ ಇಲ್ಲಿ ಪ್ರತಿಭಟನೆ ನಡೆಸುವುದು ಶೋಭೆ ತರುವುದಿಲ್ಲ. ಯುದ್ಧ ಬೇಡ ಎಂಬುದು ಎಲ್ಲರ ಅಭಿಪ್ರಾಯವಾದರೂ, ದೇಶದ ಹಿತಾಸಕ್ತಿಯನ್ನು ಮರೆತು ವರ್ತಿಸುವುದು ಸರಿಯಲ್ಲ ಎಂದು ಸುನಿಲ್ ಕುಮಾರ್ ಕಿಡಿಗೇಡಿಗಳ ವಿರುದ್ಧ ಮತ್ತು ಸರ್ಕಾರದ ನಡೆಯ ವಿರುದ್ಧ ಗುಡುಗಿದ್ದಾರೆ.

Comments (0)

Your email address will not be published. Required fields are marked *

Back to top button