Mandyaಸುದ್ದಿ

ಬತ್ತಿ ಹೋದ ಹೇಮಾವತಿ.. ಮಂಡ್ಯದಲ್ಲಿ ಶುರುವಾಯ್ತು ಜಲಕ್ಷಾಮದ ಭೀತಿ!

ರಾಜ್ಯದಲ್ಲಿ ಸೂರ್ಯನ ಕೋಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತಾಪಮಾನ ಏರಿಕೆಯ ಬೆನ್ನಲ್ಲೇ ಕಾವೇರಿ ಕಣಿವೆಯಲ್ಲೂ ನೀರಿನ ಸಮಸ್ಯೆ ವಿಕೋಪಕ್ಕೆ ಹೋಗುತ್ತಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿ ಈಗ ಜಲಕ್ಷಾಮದ ಭೀತಿ ಎದುರಾಗಿದ್ದು, ಜನಸಾಮಾನ್ಯರು ಆತಂಕಗೊಂಡಿದ್ದಾರೆ. ತಾಲೂಕಿನ ಕಟ್ಟಹಳ್ಳಿ ಬಳಿ ಹೇಮಾವತಿ ನದಿಯ ಹರಿವು ಸಂಪೂರ್ಣವಾಗಿ ಸ್ಥಗಿತಗೊಂಡಿರುವುದು ಈ ಆತಂಕಕ್ಕೆ ಮುಖ್ಯ ಕಾರಣವಾಗಿದೆ. ನದಿ ಬತ್ತಿ ಹೋಗಿರುವುದರಿಂದ ಇಡೀ ತಾಲೂಕಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದ್ದು, ಬರೀ ಮನುಷ್ಯರಿಗಷ್ಟೇ ಅಲ್ಲದೆ ಜಾನುವಾರುಗಳಿಗೂ ಕುಡಿಯುವ ನೀರು ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುವ ಮುನ್ಸೂಚನೆ ಸಿಕ್ಕಿದೆ.

ನದಿ ಪಾತ್ರದಲ್ಲಿ ನೀರಿಲ್ಲದ ಕಾರಣ ಜಾಕ್ವೆಲ್‌ಗಳಲ್ಲಿ ನೀರಿನ ಸಂಗ್ರಹ ಕುಸಿದಿದ್ದು, ಪಂಪಿಂಗ್ ಪ್ರಕ್ರಿಯೆಯು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ನದಿಯನ್ನೇ ನಂಬಿದ್ದ ಸುತ್ತಮುತ್ತಲಿನ ಕೆರೆ ಮತ್ತು ಕಟ್ಟೆಗಳು ಕೂಡ ಸಂಪೂರ್ಣವಾಗಿ ಒಣಗುತ್ತಿವೆ. ನದಿಯಲ್ಲಿ ನೀರಿನ ಹರಿವು ಪುನಾರಂಭವಾಗುವವರೆಗೂ ನೀರು ಪಂಪ್ ಮಾಡಲು ಸಾಧ್ಯವೇ ಇಲ್ಲ ಎಂದು ಹೇಮಾವತಿ ನೀರಾವರಿ ಇಲಾಖೆಯ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಯಿಂದಾಗಿ ಕುಡಿಯುವ ನೀರು ಒದಗಿಸುವುದು ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಇತ್ತ ನೀರಾವರಿ ಇಲಾಖೆಯ ಈ ಧೋರಣೆ ಮತ್ತು ಪರಿಸ್ಥಿತಿಯ ಗಂಭೀರತೆಯನ್ನು ಕಂಡು ಕೆ.ಆರ್.ಪೇಟೆ ಶಾಸಕ ಹೆಚ್.ಟಿ. ಮಂಜು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲಾಖೆಯ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡಿರುವ ಶಾಸಕರು, ತಾಲೂಕಿನ ನೀರಿನ ಸಮಸ್ಯೆಯನ್ನು ಬಗೆಹರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಸದ್ಯಕ್ಕೆ ಕೆ.ಆರ್.ಪೇಟೆಯಲ್ಲಿ ನೀರಿನ ಬವಣೆ ನೀಗುವುದು ಮರೀಚಿಕೆಯಾಗಿದ್ದು, ಮಳೆಯಾಗಲಿ ಅಥವಾ ನದಿಗೆ ನೀರು ಬಿಡಲಿ ಎಂದು ಜನ ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದಾರೆ.

Comments (0)

Your email address will not be published. Required fields are marked *

Back to top button