ಸುದ್ದಿ

ಕಬ್ಬನ್ ಪಾರ್ಕ್ ಆತ್ಮಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್: 20 ದಿನಗಳ ಬಳಿಕ ಬಯಲಾಯ್ತು ಸಾವಿನ ರಹಸ್ಯ!

ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆರಂಭದಲ್ಲಿ ಇದೊಂದು ಸಾಮಾನ್ಯ ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದ ಕಬ್ಬನ್ ಪಾರ್ಕ್ ಪೊಲೀಸರು, ಸತತ 20 ದಿನಗಳ ಕಾಲ ನಡೆಸಿದ ತನಿಖೆಯ ಬಳಿಕ ಸಾವಿನ ಹಿಂದಿನ ಅಸಲಿ ರಹಸ್ಯವನ್ನು ಪತ್ತೆಹಚ್ಚಿದ್ದಾರೆ. ಇದು ಕೇವಲ ವೈಯಕ್ತಿಕ ಕಾರಣದ ಆತ್ಮಹತ್ಯೆಯಲ್ಲ, ಬದಲಾಗಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕುವ ಮೂಲಕ ವ್ಯಕ್ತಿಯನ್ನು ಸಾವಿನ ದವಡೆಗೆ ತಳ್ಳಲಾಗಿದೆ ಎಂಬ ಸ್ಫೋಟಕ ಮಾಹಿತಿ ಹೊರಬಂದಿದೆ. ರಾಜಸ್ಥಾನದಲ್ಲಿ ನಡೆದ ಹಳೆಯ ಗಲಾಟೆಯ ಸೇಡು ಬೆಂಗಳೂರಿನಲ್ಲಿ ಬೆದರಿಕೆಯ ರೂಪ ಪಡೆದುಕೊಂಡಿದ್ದು, ಮನನೊಂದ ವ್ಯಕ್ತಿ ಅಂತಿಮವಾಗಿ ಕಬ್ಬನ್ ಪಾರ್ಕ್‌ನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಮೃತ ವ್ಯಕ್ತಿಯನ್ನು ಸುರೇಶ್ ಕುಮಾರ್ ಪುರೋಹಿತ್ ಎಂದು ಗುರುತಿಸಲಾಗಿದ್ದು, ಇವರ ಸಾವಿನ ಹಿನ್ನೆಲೆಯಲ್ಲಿ ಐದು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸುರೇಶ್ ಅವರ ಸಹೋದರ ವಾಸನರಾಮ್ ನೀಡಿದ ದೂರಿನ ಮೇರೆಗೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಮೂಲತಃ ರಾಜಸ್ಥಾನದವರಾದ ಸುರೇಶ್ ಕುಮಾರ್, ತಮ್ಮೂರಿನಲ್ಲಿ ಜಬರರಾಮ್ ಎಂಬಾತನೊಂದಿಗೆ ಸಣ್ಣ ಜಗಳ ಮಾಡಿಕೊಂಡಿದ್ದರು. ಈ ಗಲಾಟೆಯ ಸಂದರ್ಭದಲ್ಲಿ ಇಬ್ಬರ ನಡುವೆ ಪರಸ್ಪರ ಹಲ್ಲೆ ನಡೆದಿತ್ತು. ಆಗ ಜಬರರಾಮ್ ತನ್ನ ಬೆಂಗಳೂರಿನ ಸ್ನೇಹಿತರ ಮೂಲಕ ಪಾಠ ಕಲಿಸುವುದಾಗಿ ಸುರೇಶ್‌ಗೆ ಬೆದರಿಕೆ ಹಾಕಿದ್ದನು ಎಂದು ತಿಳಿದುಬಂದಿದೆ.

ಊರಿನಿಂದ ಬೆಂಗಳೂರಿಗೆ ಬಂದಿದ್ದ ಸುರೇಶ್ ಕುಮಾರ್ ಅವರನ್ನು ಅಟ್ಟಿಸಿಕೊಂಡು ಬಂದ ಜಬರರಾಮ್, ಮಾರ್ಚ್ ಕೊನೆಯ ವಾರದಲ್ಲಿ ತನ್ನ ಸ್ನೇಹಿತರಾದ ಪ್ರವೀಣ್, ಭಾವೇಶ್, ನಿತೇಶ್ ಮತ್ತು ಮುಖೇಶ್ ಎಂಬುವವರಿಗೆ ಸುರೇಶ್ ಮೇಲೆ ಹಲ್ಲೆ ಮಾಡಲು ಸುಪಾರಿ ನೀಡಿದ್ದನು. ಈ ಸಂಚಿನ ಬಗ್ಗೆ ಸುರೇಶ್ ತನ್ನ ಸಹೋದರನಿಗೆ ಕರೆ ಮಾಡಿ ಆತಂಕ ವ್ಯಕ್ತಪಡಿಸಿದ್ದರು. ಏಪ್ರಿಲ್ 2 ರಂದು ಖಾಸಗಿ ಹೋಟೆಲ್‌ನಲ್ಲಿ ಊಟ ಮುಗಿಸಿ ಹೊರಬರುತ್ತಿದ್ದ ಸುರೇಶ್ ಮೇಲೆ ಆರೋಪಿಗಳು ಭೀಕರವಾಗಿ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಈ ನಿರಂತರ ಕಿರುಕುಳ ಮತ್ತು ಪ್ರಾಣ ಬೆದರಿಕೆಯಿಂದ ತೀವ್ರವಾಗಿ ಮನನೊಂದ ಸುರೇಶ್ ಕುಮಾರ್ ಅಂತಿಮವಾಗಿ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

Comments (0)

Your email address will not be published. Required fields are marked *

Back to top button