ರಾಜ್ಯಸುದ್ದಿ

ಬಸ್ಸಿಗೆ ಡಿಕ್ಕಿ ಹೊಡೆದ ಉಪಸಭಾಪತಿ ರುದ್ರಪ್ಪ ಲಮಾಣಿ ಬೆಂಗಾವಲು ವಾಹನ..!

ಹಾವೇರಿ: ಕರ್ನಾಟಕ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ ಅವರ ಬೆಂಗಾವಲು ವಾಹನವು ಕೆಎಸ್‌ಆರ್‌ಟಿಸಿ ಬಸ್ಸಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಘಟನೆ ಶನಿವಾರ ನಡೆದಿದೆ. ನಗರದ ವಾಲ್ಮೀಕಿ ವೃತ್ತದಿಂದ ಹೊಸಮನಿ ಸಿದ್ದಪ್ಪ ವೃತ್ತದ ಕಡೆಗೆ ಸಾಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದ್ದು, ಅತೀ ವೇಗವಾಗಿ ಬಂದ ಬೆಂಗಾವಲು ವಾಹನವು ಹಾವೇರಿಯಿಂದ ಗದಗಕ್ಕೆ ಹೊರಟಿದ್ದ ಕೆಎ-೨೭ ಎಫ್‌೦೭೨೬ ಸಂಖ್ಯೆಯ ಸರ್ಕಾರಿ ಬಸ್ಸಿನ ಹಿಂಬದಿಗೆ ಬಲವಾಗಿ ಗುದ್ದಿದೆ. ಈ ಭೀಕರ ಡಿಕ್ಕಿಯ ಪರಿಣಾಮವಾಗಿ ಬೆಂಗಾವಲು ವಾಹನದ ಮುಂಭಾಗವು ಸಂಪೂರ್ಣವಾಗಿ ನುಜ್ಜುನುಜ್ಜಾಗಿದ್ದು, ಬಸ್ಸಿನ ಹಿಂಬದಿಗೂ ತೀವ್ರ ಹಾನಿಯಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಬೆಂಗಾವಲು ವಾಹನದ ಚಾಲಕ ಚನ್ನಬಸಪ್ಪ ಅರ್ಚಕ್ ವಿರುದ್ಧ ಹಾವೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚಾಲಕನ ಅಜಾಗರೂಕತೆ ಮತ್ತು ಮಿತಿಮೀರಿದ ವೇಗವೇ ಈ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಪ್ರಾಥಮಿಕವಾಗಿ ಗುರುತಿಸಲಾಗಿದೆ. ಸದ್ಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಸಂಭವಿಸಬಹುದಾದ ದೊಡ್ಡ ಮಟ್ಟದ ಪ್ರಾಣಾಪಾಯಗಳು ತಪ್ಪಿವೆ ಎನ್ನಲಾಗಿದೆ.

Comments (0)

Your email address will not be published. Required fields are marked *

Back to top button