Top Newsಜಿಲ್ಲೆರಾಜಕೀಯಸುದ್ದಿ

ಅನಂತ್ ಕುಮಾರ್ ಹೆಗಡೆ ಸೆಕೆಂಡ್ ಇನ್ನಿಂಗ್ಸ್ ಆರಂಭ; ಮಾರಿಕಾಂಬೆ ದರ್ಶನ ಪಡೆದ ಫೈರ್‌ಬ್ರ್ಯಾಂಡ್!

ಉತ್ತರ ಕನ್ನಡದ ಫೈರ್‌ಬ್ರ್ಯಾಂಡ್ ನಾಯಕ, ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಸಕ್ರಿಯ ರಾಜಕಾರಣದ ಎರಡನೇ ಇನ್ನಿಂಗ್ಸ್ ಆರಂಭಿಸಲು ಭರ್ಜರಿ ಮುಹೂರ್ತ ನಿಗದಿಪಡಿಸಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ ದಿನದಿಂದ ಅಜ್ಞಾತವಾಸದಲ್ಲಿದ್ದ ಹೆಗಡೆ, ಈಗ ಶಿರಸಿ ಮಾರಿಕಾಂಬಾ ದೇವಿಯ ಆಶೀರ್ವಾದದೊಂದಿಗೆ ಮತ್ತೆ ಅಖಾಡಕ್ಕೆ ಮರಳುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.

ಶಿರಸಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ಮಾರಿಕಾಂಬಾ ಜಾತ್ರೆಯ ಅಂಗವಾಗಿ ಇಂದು ಬೆಳಿಗ್ಗೆ ಪತ್ನಿ ಶ್ರೀರೂಪಾ ಅವರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದರು. ಈ ಭೇಟಿಯು ಕೇವಲ ಧಾರ್ಮಿಕವಾಗಿರದೆ, ಅವರ ರಾಜಕೀಯ ಪುನರಾಗಮನದ ಸ್ಪಷ್ಟ ಮುನ್ಸೂಚನೆಯಾಗಿದೆ. ಚುನಾವಣಾ ರಾಜಕೀಯದಿಂದ ದೂರಿಟ್ಟಿದ್ದ ಪಕ್ಷದ ನಿರ್ಧಾರದ ನಂತರ ಮೌನಕ್ಕೆ ಶರಣಾಗಿದ್ದ ಹೆಗಡೆ, ಈಗ ಸದ್ದಿಲ್ಲದೆ ತನ್ನ ಸಂಘಟನಾ ಶಕ್ತಿಯನ್ನು ಪ್ರದರ್ಶಿಸಲು ಮುಂದಾಗಿದ್ದಾರೆ.

ಮಾರ್ಚ್ 8ರಂದು ಭಟ್ಕಳದಲ್ಲಿ ನಡೆಯಲಿರುವ ‘ಹಿಂದೂ ಸಂಗಮ’ ಕಾರ್ಯಕ್ರಮದ ಮೂಲಕ ಅವರು ಅಧಿಕೃತವಾಗಿ ಸಕ್ರಿಯ ರಾಜಕಾರಣಕ್ಕೆ ಮರಳಲಿದ್ದಾರೆ. ಈ ಬೃಹತ್ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಲಿದ್ದು, ತಮ್ಮ ಮುಂದಿನ ನಡೆ ಹಾಗೂ ಸಿದ್ಧಾಂತದ ಬಗ್ಗೆ ಯಾವ ರೀತಿ ಗರ್ಜಿಸಲಿದ್ದಾರೆ ಎಂಬುದು ಕುತೂಹಲದ ಸಂಗತಿಯಾಗಿದೆ.

Comments (0)

Your email address will not be published. Required fields are marked *

Back to top button