ಜಿಲ್ಲೆಸುದ್ದಿ

ಹೆಸ್ಕಾಂ ಹೆಸರಲ್ಲಿ ಲೂಟಿ ಮಾಡ್ತಿದ್ದ ವಂಚಕ ಅಂದರ್..!

ಹುಬ್ಬಳ್ಳಿ: ಹೆಸ್ಕಾಂ ಸಿಬ್ಬಂದಿ ಸೋಗಿನಲ್ಲಿ ಸಾರ್ವಜನಿಕರಿಗೆ ಪಂಗನಾಮ ಹಾಕುತ್ತಿದ್ದ ವಂಚಕನ ಆಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಖಾಕಿ ಸಮವಸ್ತ್ರ ಧರಿಸಿ ತಾನು ವಿದ್ಯುತ್ ಬಿಲ್ ವಸೂಲಿಗಾರನೆಂದು ನಂಬಿಸಿ, ಅಮಾಯಕ ಜನರಿಂದ ಹಣ ಪೀಕುತ್ತಿದ್ದ ಖದೀಮನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಹುಬ್ಬಳ್ಳಿಯ ಆನಂದ ನಗರದಲ್ಲಿ ಮನೆ ಮನೆಗೆ ತೆರಳುತ್ತಿದ್ದ ಈ ವಂಚಕ, ವಿದ್ಯುತ್ ಬಿಲ್ ಬಾಕಿ ಇದೆ ಎಂದು ಹೇಳಿ 1,000 ರಿಂದ 2,000 ರೂಪಾಯಿವರೆಗೆ ಹಣ ವಸೂಲಿ ಮಾಡುತ್ತಿದ್ದ. ಹಣ ನೀಡಿದ ಸಾರ್ವಜನಿಕರು ರಸೀದಿ ಕೇಳಿದಾಗ “ಸರ್ವರ್ ಡೌನ್ ಇದೆ” ಎಂಬ ಹಳೇ ರಾಗ ಹಾಡಿ ಜಾಣತನದಿಂದ ಅಲ್ಲಿಂದ ಕಾಲ್ಕಿತ್ತುತ್ತಿದ್ದ. ಸತತವಾಗಿ ರಸೀದಿ ನೀಡದೆ ವಂಚಿಸುತ್ತಿದ್ದ ಈತನ ನಡವಳಿಕೆಯಿಂದ ಅನುಮಾನಗೊಂಡ ಸ್ಥಳೀಯರು, ಆತನನ್ನು ತಡೆದು ವಿಚಾರಣೆ ನಡೆಸಿದಾಗ ಅಸಲಿ ಬಣ್ಣ ಬಯಲಾಗಿದೆ. ಕೂಡಲೇ ಎಚ್ಚೆತ್ತ ಜನರು ಆತನನ್ನು ಹಿಡಿದು ಹಳೆ ಹುಬ್ಬಳ್ಳಿ ಪೊಲೀಸರ ವಶಕ್ಕೆ ನೀಡಿದ್ದಾರೆ.

ಈ ಘಟನೆಯ ಬೆನ್ನಲ್ಲೇ ಹೆಸ್ಕಾಂ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಮನೆಗೆ ಬರುವ ಸಿಬ್ಬಂದಿಯಿಂದ ಕಡ್ಡಾಯವಾಗಿ ಗುರುತಿನ ಚೀಟಿ ಕೇಳುವಂತೆ ಸೂಚಿಸಿದೆ. ಯಾವುದೇ ಅಧಿಕೃತ ರಸೀದಿ ಇಲ್ಲದೆ ಹಣ ನೀಡಬಾರದು ಮತ್ತು ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಹೆಸ್ಕಾಂ ಕಚೇರಿ ಅಥವಾ ಪೊಲೀಸರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

Comments (0)

Your email address will not be published. Required fields are marked *

Back to top button