ದೇಶ/ವಿದೇಶಸುದ್ದಿ

ಕೋಟ್ಯಂತರ ಮೌಲ್ಯದ ನೋಟು ಹೊತ್ತೊಯ್ಯುತ್ತಿದ್ದ ವಾಯುಪಡೆ ವಿಮಾನ ಪತನ

ದಕ್ಷಿಣ ಅಮೇರಿಕಾ : ಬೊಲಿವಿಯಾದ ಎಲ್ ಆಲ್ಟೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ಹೆದ್ದಾರಿಯಲ್ಲಿ ಸಂಭವಿಸಿದ ಸೇನಾ ಸರಕು ವಿಮಾನದ ಪತನವು ಇಡೀ ದೇಶವನ್ನೇ ಆತಂಕಕ್ಕೆ ತಳ್ಳಿದೆ. ಹೊಸ ಕರೆನ್ಸಿ ನೋಟುಗಳನ್ನು ಹೊತ್ತು ಸಾಗುತ್ತಿದ್ದ ಬೊಲಿವಿಯನ್ ವಾಯುಪಡೆಗೆ ಸೇರಿದ ಹರ್ಕ್ಯುಲಸ್ ವಿಮಾನವು ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷಕ್ಕೆ ತುತ್ತಾಗಿ ನೇರವಾಗಿ ಜನನಿಬಿಡ ಹೆದ್ದಾರಿಯ ಮೇಲೆ ಅಪ್ಪಳಿಸಿದೆ.

ಈ ಭೀಕರ ಅವಘಡದಲ್ಲಿ ಕನಿಷ್ಠ 15 ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ದಳದ ಮುಖ್ಯಸ್ಥ ಪಾವೆಲ್ ಟೋವರ್ ಅವರು ದೃಢಪಡಿಸಿದ್ದಾರೆ. ವಿಮಾನವು ಹೆದ್ದಾರಿಗೆ ಅಪ್ಪಳಿಸಿದ ರಭಸಕ್ಕೆ ಬೆಂಕಿಯ ಕೆನ್ನಾಲಿಗೆ ಹರಡಿದ್ದು, ರಸ್ತೆಯಲ್ಲಿದ್ದ ನೂರಾರು ವಾಹನಗಳು ಕ್ಷಣಾರ್ಧದಲ್ಲಿ ನಜ್ಜುಗುಜ್ಜಾಗಿ ಸುಟ್ಟು ಕರಕಲಾಗಿವೆ.

ಬೊಲಿವಿಯಾದ ಕೇಂದ್ರ ಬ್ಯಾಂಕಿನಿಂದ ಇತರ ನಗರಗಳಿಗೆ ವಿತರಣೆ ಮಾಡಲು ಕೋಟ್ಯಂತರ ರೂಪಾಯಿ ಮೌಲ್ಯದ ಹೊಸ ಕರೆನ್ಸಿ ನೋಟುಗಳನ್ನು ಈ ವಿಮಾನದಲ್ಲಿ ಸಾಗಿಸಲಾಗುತ್ತಿತ್ತು. ವಿಮಾನವು ನೆಲಕ್ಕೆ ಅಪ್ಪಳಿಸಿದ ತೀವ್ರತೆಗೆ ಅದರಲ್ಲಿದ್ದ ನೋಟುಗಳ ಕಂತೆಗಳು ಗಾಳಿಯಲ್ಲಿ ಹಾರಿ, ರಸ್ತೆಯಾದ್ಯಂತ ಹರಡಿಕೊಂಡಿವೆ. ಹೊಗೆ ಮತ್ತು ಬೆಂಕಿಯ ನಡುವೆಯೇ ರಸ್ತೆಯ ತುಂಬೆಲ್ಲಾ ಹೊಸ ನೋಟುಗಳು ಹರಡಿಕೊಂಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ದುರಂತದ ಸ್ಥಳದಲ್ಲಿ ಭದ್ರತಾ ಪಡೆಗಳು ಜಮಾಯಿಸಿದ್ದು, ಹರಡಿರುವ ಕರೆನ್ಸಿಯನ್ನು ರಕ್ಷಿಸುವುದರ ಜೊತೆಗೆ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸುವ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗುತ್ತಿದೆ.

ಘಟನಾ ಸ್ಥಳದಲ್ಲಿ ಸೃಷ್ಟಿಯಾಗಿರುವ ಭೀಕರತೆಯಿಂದಾಗಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಬೊಲಿವಿಯಾ ಸರ್ಕಾರವು ಈ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು, ತಾಂತ್ರಿಕ ದೋಷಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ವಿಮಾನದ ಬ್ಲ್ಯಾಕ್ ಬಾಕ್ಸ್ ಹುಡುಕಾಟ ನಡೆಸಲಾಗುತ್ತಿದೆ.

Comments (0)

Your email address will not be published. Required fields are marked *

Back to top button