ಹಾಲಿನ ಪುಡಿ ಕಲಬೆರಕೆ ಪ್ರಕರಣ – ಮನ್ಮುಲ್ ಮಾಜಿ ಅಧ್ಯಕ್ಷ ಶಿವಕುಮಾರ್ ಅರೆಸ್ಟ್!
Milk powder adulteration case - Manmul ex-president Sivakumar arrested!

ಮಂಡ್ಯ : ಮನ್ಮುಲ್ ಹಾಲಿನ ಪುಡಿ ಕಲಬೆರಕೆ ಪ್ರಕರಣ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಇದೀಗ ಈ ಕೇಸ್ ಸಂಬಂಧ ಮನ್ಮುಲ್ ಮಾಜಿ ಅಧ್ಯಕ್ಷ ಎಸ್. ಶಿವಕುಮಾರ್ ಅವರನ್ನು ಮದ್ದೂರು ಪೊಲೀಸರು ನಿನ್ನೆ ತಡರಾತ್ರಿ ಬಂಧಿಸಿದ್ದಾರೆ.
ಕಳೆದ ವಾರವಷ್ಟೇ ಪೊಲೀಸರು ನೋಟೀಸ್ ನೀಡಿ ಶಿವಕುಮಾರ್ ಅವರನ್ನು ವಿಚಾರಣೆ ನಡೆಸಿದ್ದರು. ಈ ವೇಳೆ ಮತ್ತೊಬ್ಬ ಪ್ರಮುಖ ಆರೋಪಿ ಜಾಧವ್ ಹಾಗೂ ಶಿವಕುಮಾರ್ ಅವರನ್ನು ಮುಖಾಮುಖಿ ವಿಚಾರಣೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಪೊಲೀಸ್ ಠಾಣೆಯಲ್ಲೇ ಮಾತಿನ ಚಕಮಕಿ ನಡೆದಿತ್ತು.
ವಿಚಾರಣೆಯ ಹಂತದಲ್ಲಿ ಪ್ರಕರಣದಲ್ಲಿ ಶಿವಕುಮಾರ್ ಅವರ ಪಾತ್ರವಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತಡರಾತ್ರಿ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ ಶಿವಕುಮಾರ್ ಅವರನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.
ಇಂದು ಮಧ್ಯಾಹ್ನದೊಳಗೆ ಆರೋಪಿ ಶಿವಕುಮಾರ್ ಅವರನ್ನು ಮದ್ದೂರು ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಲಿದ್ದು, ಹೆಚ್ಚಿನ ತನಿಖೆಗಾಗಿ ಕಸ್ಟಡಿಗೆ ಕೋರುವ ಸಾಧ್ಯತೆಯಿದೆ. ಹಾಲಿನ ಪುಡಿ ಕಲಬೆರಕೆ ಹಗರಣದಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರು ಸೆರೆಯಾಗಿರುವುದು ಮಂಡ್ಯ ರಾಜಕೀಯ ಹಾಗೂ ಸಹಕಾರಿ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.




