
ಕಾಸರಗೋಡು : ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ 2 ಕೋಟಿ ಅನುದಾನದಲ್ಲಿ ಕಾಸರಗೋಡಿನ ಬದಿಯಡ್ಕ ಗ್ರಾಮದಲ್ಲಿ ನಿರ್ಮಿಸಲಾಗಿರುವ ರಾಷ್ಟ್ರಕವಿ ಡಾ. ಕಯ್ಯಾರ ಕಿಞ್ಞಣ್ಣ ರೈ ಹೆಸರಿನ ‘ಕನ್ನಡ ಭವನ’ದ ಉದ್ಘಾಟನಾ ಸಮಾರಂಭಕ್ಕೆ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರಿಗೆ ಅಧಿಕೃತ ಆಹ್ವಾನ ನೀಡಲಾಗಿದೆ.
ಜುಲೈ.22ರಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ ಹಾಗೂ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ ಅವರ ನೇತೃತ್ವದ ನಿಯೋಗವು ಕೇರಳ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಉದ್ಘಾಟನೆಯ ಅಧಿಕೃತ ಆಹ್ವಾನ ಪತ್ರಿಕೆಯನ್ನು ಹಸ್ತಾಂತರಿಸಿತು.

ಈ ವೇಳೆ ಪ್ರಾಧಿಕಾರದ ನಿಯೋಗವು ಕಾಸರಗೋಡು ಭಾಗದ ಕನ್ನಡಿಗರ ಪ್ರಮುಖ ಸಮಸ್ಯೆಗಳಾದ ಕನ್ನಡ ಶಿಕ್ಷಕರ ನೇಮಕ, ನಾಮಫಲಕಗಳು, ರೇಷನ್ ಹಾಗೂ ಮತದಾರರ ಕಾರ್ಡ್‌ಗಳಲ್ಲಿ ಕನ್ನಡ ಬಳಕೆ ಮತ್ತು ಮಲೆಯಾಳಿ ಭಾಷಾ ಬಿಲ್‌ನಿಂದ ಕಾಸರಗೋಡಿಗೆ ವಿನಾಯಿತಿ ನೀಡುವಂತೆ ಕೇರಳ ಸಿಎಂಗೆ ಮನವಿ ಸಲ್ಲಿಸಲಾಯಿತು.
ನಿಯೋಗ ಸಲ್ಲಿಸಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇರಳ ಮುಖ್ಯಮಂತ್ರಿಗಳು, ಕರ್ನಾಟಕದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕನ್ನಡ ಭವನದ ಉದ್ಘಾಟನಾ ದಿನಾಂಕವನ್ನು ನಿಗದಿಪಡಿಸುವುದಾಗಿ ತಿಳಿಸಿದರು. ಅಲ್ಲದೆ, ಗಡಿ ಭಾಗದ ಕನ್ನಡಿಗರ ಸಮಸ್ಯೆ ಪರಿಹಾರಕ್ಕೆ ಎಲ್ಲಾ ಇಲಾಖೆಗೆ ನಿರ್ದೇಶನ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಂಜೇಶ್ವರ ಶಾಸಕರಾದ ಎ.ಕೆ.ಎಂ. ಅಶ್ರಫ್ ಹಾಗೂ ಕಾಸರಗೋಡಿನ ಹಲವು ಕನ್ನಡಿಗ ಮುಖಂಡರು ಉಪಸ್ಥಿತರಿದ್ದು, ಗಡಿ ಕನ್ನಡಿಗರ ಧ್ವನಿಗೆ ಬೆಂಬಲ ಸೂಚಿಸಿದರು.




