GBA ಅಧಿಕಾರಿಗಳ ಮೇಲೆ ಹಲ್ಲೆ – ಕೈಮುಗಿದು ಕ್ಷಮೆಯಾಚಿಸಿದ ಆರೋಪಿಗಳು!
Assault on GBA officials – Accused apologize with folded hands!

ಬೆಂಗಳೂರು : ರಾಜಧಾನಿಯ ಶಿವಾಜಿನಗರದಲ್ಲಿ ಫುಟ್ಪಾತ್ ತೆರವು ಕಾರ್ಯಾಚರಣೆ ವೇಳೆ GBA ಅಧಿಕಾರಿಗಳ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು 11 ಮಂದಿಯನ್ನು ಬಂಧಿಸಿದ್ದು, ವಿಚಾರಣೆ ವೇಳೆ ಘಟನೆಯ ಹಿಂದಿದ್ದ ಪಕ್ಕಾ ಸ್ಕೆಚ್ ಬಯಲಾಗಿದೆ. ಇದೀಗ ಆರೋಪಿಗಳು ನಾವು ಮಾಡಿದ್ದು ತಪ್ಪು ಎಂದು ಕೈಮುಗಿದು ಬೇಡಿಕೊಂಡಿದ್ದಾರೆ.
ಬಂಧನದ ಬಳಿಕ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರ ವಿಚಾರಣೆಗೆ ಕಂಗಾಲಾದ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ನಾವು ಮಾಡಿದ್ದು ತಪ್ಪು, ಯಾರೂ ಕೂಡ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಇನ್ಮುಂದೆ ಯಾವತ್ತೂ ಇಂತಹ ತಪ್ಪು ಮಾಡುವುದಿಲ್ಲ ಎಂದು ಪೊಲೀಸರ ಎದುರು ಕೈಮುಗಿದು ಕ್ಷಮೆಯಾಚಿಸಿದ್ದಾರೆ.
ಮುಂಚಿತವಾಗಿಯೇ ನಡೆದಿತ್ತು ಸಂಚು!
ಪೊಲೀಸರ ತನಿಖೆಯ ವೇಳೆ ಕೃತ್ಯದ ಆಘಾತಕಾರಿ ಸತ್ಯಗಳು ಹೊರಬಿದ್ದಿವೆ. ಫುಟ್ಪಾತ್ ತೆರವು ಕಾರ್ಯಾಚರಣೆ ನಡೆಯಲಿದೆ ಎಂಬ ಮಾಹಿತಿ ಸಿಗುತ್ತಿದ್ದಂತೆಯೇ ಆರೋಪಿಗಳು ಅಧಿಕಾರಿಗಳ ಮೇಲೆ ದಾಳಿ ನಡೆಸಲು ಪೂರ್ವನಿಯೋಜಿತ ಸಂಚು ರೂಪಿಸಿದ್ದರು. ಪ್ರಮುಖ ಆರೋಪಿ ಬಸವರಾಜ್ ಪಡುಕೋಟೆ ತನ್ನ ಚಾಲಕನ ಮೂಲಕ ಮುಂಚಿತವಾಗಿಯೇ ಪೆಪ್ಪರ್ ಸ್ಪ್ರೇ ಖರೀದಿಸಿಟ್ಟುಕೊಂಡಿದ್ದ ಎಂಬುದು ಗೊತ್ತಾಗಿದೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಬಹುತೇಕ ಆರೋಪಿಗಳನ್ನ ಬಂಧಿಸಲಾಗಿದೆ. ಪ್ರಮುಖ ಆರೋಪಿ ಬಸವರಾಜ್ ಪಡುಕೋಟೆ ಸೇರಿ ಮೂವರು ಆರೋಪಿಗಳನ್ನ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಿದ್ದಾರೆ.



