bengaluru

ಬೆಂಗಳೂರಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ – ಸಿಸಿಟಿವಿಯಲ್ಲಿ ದೃಶ್ಯ ಸೆರೆ, ಸ್ಥಳೀಯರಲ್ಲಿ ಆತಂಕ!

Leopard sighted again in Bengaluru - CCTV footage captures it, locals worried!

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಚಿರತೆಗಳ ಹಾವಳಿ ಮುಂದುವರಿದಿದ್ದು, ಇದೀಗ ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ಚಿರತೆಯೊಂದು ಸಾರ್ವಜನಿಕರ ನಿದ್ದೆಗೆಡಿಸಿದೆ. ಬ್ಯಾಡರಹಳ್ಳಿಯ ಭಾರತ್ ನಗರದಲ್ಲಿ ಚಿರತೆ ಪದೇಪದೇ ಪ್ರತ್ಯಕ್ಷವಾಗುತ್ತಿದ್ದು, ಸ್ಥಳೀಯರು ಭಯಭೀತರಾಗಿ ದಿನ ಕಳೆಯುವಂತಾಗಿದೆ.

ಬ್ಯಾಡರಹಳ್ಳಿಯ ಭಾರತ್ ನಗರದಲ್ಲಿ ಗುರುವಾರ ರಾತ್ರಿ ಮತ್ತು ಇಂದು ಮುಂಜಾನೆ ಚಿರತೆ ಕಾಣಿಸಿಕೊಂಡಿದೆ. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಮತ್ತು ಇಂದು ಮುಂಜಾನೆ 4 ಗಂಟೆಗೆ ಚಿರತೆ ಓಡಾಡುತ್ತಿರುವುದು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕಗೊಂಡಿದ್ದಾರೆ.

ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ತಿಳಿದು ನಿನ್ನೆ ಸ್ಥಳಕ್ಕೆ ಭೇಟಿ ನೀಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಆದರೆ, ಚಿರತೆಯ ಯಾವುದೇ ಸುಳಿವು ಸಿಗದ ಕಾರಣ, ಸಿಬ್ಬಂದಿ ಕೇವಲ ಸಿಡಿಮದ್ದುಗಳನ್ನು ಸಿಡಿಸಿ ಹಿಂದಿರುಗಿದ್ದರು. ಚಿರತೆಯು ರಾತ್ರಿ ಹಾಗೂ ಮುಂಜಾನೆ ವೇಳೆ ಸಂಚರಿಸುತ್ತಿರುವುದರಿಂದ, ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಶಾಲಾ ಮಕ್ಕಳನ್ನು ಹೊರಗೆ ಕಳುಹಿಸಲು ಪೋಷಕರು ಭಯಪಡುತ್ತಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.

ಇಂದು ಮತ್ತೆ ಚಿರತೆ ಕಾಣಿಸಿಕೊಂಡಿರೋದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತೀವ್ರ ನಿಗಾ ವಹಿಸಿ ಹುಡುಕಾಟ ನಡೆಸಲಿದ್ದಾರೆ. ಅದನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಮುಖ ಸ್ಥಳಗಳಲ್ಲಿ ಬೋನು ಇಟ್ಟು ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ.

Comments (0)

Your email address will not be published. Required fields are marked *

Back to top button