bidarEducation

ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕಳಪೆ ಊಟ; ಸಿಡಿದೆದ್ದ ಶರಣು ಸಲಗರ!

hopeless food in Hostel in Bidar MLA Sharanu Salagar fires officers

ಬೀದರ್/ಬಸವಕಲ್ಯಾಣ: ಸರ್ಕಾರಿ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಕಳಪೆ ಗುಣಮಟ್ಟದ ಆಹಾರದ ವಿರುದ್ಧ ವಿದ್ಯಾರ್ಥಿಗಳು ವಿನೂತನ ಹಾಗೂ ಆಕ್ರೋಶದ ಪ್ರತಿಭಟನೆ ನಡೆಸಿದ್ದಾರೆ. ಬಸವಕಲ್ಯಾಣದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಸತಿ ನಿಲಯದ ವಿದ್ಯಾರ್ಥಿಗಳು, ತಮಗೆ ನೀಡಲಾಗುತ್ತಿದ್ದ ಹಾಳಾದ ಅನ್ನ, ಕಳಪೆ ಸಾಂಬಾರ್ ಹಾಗೂ ಕೊಳೆತ ಟೊಮೆಟೊ-ತರಕಾರಿಗಳ ಸಮೇತ ನೇರವಾಗಿ ಬಸವಕಲ್ಯಾಣ ಶಾಸಕ ಶರಣು ಸಲಗರ ಅವರ ಕಚೇರಿಗೆ ಲಗ್ಗೆ ಇಟ್ಟಿದ್ದಾರೆ!

ತಮ್ಮದೇ ಹಾಸ್ಟೆಲ್‌ನ ಕಳಪೆ ಅಡುಗೆಯನ್ನು ಕಣ್ಣಾರೆ ಕಂಡು ಆಘಾತಕ್ಕೊಳಗಾದ ಶಾಸಕ ಶರಣು ಸಲಗರ ಅವರು, ಮಧ್ಯರಾತ್ರಿಯೇ ಅಧಿಕಾರಿಗಳಿಗೆ ಕ್ಲಾಸ್ ತಗೆದುಕೊಂಡಿರುವ ರೋಚಕ ಘಟನೆ ನಡೆದಿದೆ.

ಕೊಳೆತ ತರಕಾರಿ, ಕಳಪೆ ಅನ್ನ ನೋಡಿ ಶಾಸಕರು ಫುಲ್ ಗರಂ!


ಕಳೆದ ಒಂದು ತಿಂಗಳಿಂದ ವಸತಿ ನಿಲಯದಲ್ಲಿ ಅತ್ಯಂತ ಕಳಪೆ ಮತ್ತು ನಾಯಿಗಳೂ ಮೂಸಿ ನೋಡದಂತಹ ಆಹಾರವನ್ನು ನೀಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಶಾಸಕರ ಮುಂದೆ ಅಳಲು ತೋಡಿಕೊಂಡರು. ವಿದ್ಯಾರ್ಥಿಗಳು ತಂದಿದ್ದ ಮುದ್ದೆ ಮುದ್ದೆಯಾಗಿದ್ದ ಅನ್ನ, ನೀರಿನಂತಿದ್ದ ಬೇಳೆ ಸಾರು ಹಾಗೂ ಕೊಳೆತು ನಾರುತ್ತಿದ್ದ ಟೊಮೆಟೊಗಳನ್ನು ಕಂಡು ಶಾಸಕ ಶರಣು ಸಲಗರ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಕಚೇರಿಗೆ ಹಸಿದ ಹೊಟ್ಟೆಯಲ್ಲಿ ನ್ಯಾಯ ಕೇಳಿ ಬಂದಿದ್ದ ವಿದ್ಯಾರ್ಥಿಗಳನ್ನು ಶಾಸಕರು ಬರಿಗೈಲಿ ಕಳುಹಿಸಲಿಲ್ಲ. ತಕ್ಷಣವೇ ಕಾರ್ಯಪ್ರವೃತ್ತರಾದ ಅವರು, ತಡರಾತ್ರಿಯಲ್ಲೇ ಉತ್ತಮ ಗುಣಮಟ್ಟದ ಅನ್ನ, ಸಾಂಬಾರು ಹಾಗೂ ಊಟವನ್ನು ಪ್ರೀತಿಯಿಂದ ಮಾಡಿಸಿ, ಕಚೇರಿಯಲ್ಲೇ ಎಲ್ಲಾ ವಿದ್ಯಾರ್ಥಿಗಳಿಗೆ ಕುಳ್ಳಿರಿಸಿ ಹೊಟ್ಟೆತುಂಬಾ ಊಟ ಹಾಕಿಸುವ ಮೂಲಕ ಮಾನವೀಯತೆ ಮೆರೆದರು.

“ನಿಮ್ಮ ಮಕ್ಕಳಿಗೆ ಇದೇ ಊಟ ಹಾಕ್ತೀರಾ?” – ಅಧಿಕಾರಿಗಳಿಗೆ ಶಾಸಕರ ತರಾಟೆ!
ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಂತೆ, ಶಾಸಕರು ನೇರವಾಗಿ ಸ್ಥಳದಲ್ಲೇ ಹಾಸ್ಟೆಲ್ ವಾರ್ಡನ್ ವಾಣಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಗಿರೀಶ್ ಹಾಗೂ ತಾಲ್ಲೂಕು ಅಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ಶಾಸಕರು ಗುಡುಗಿದರು.
“ಸರ್ಕಾರ ಕೋಟ್ಯಂತರ ರೂಪಾಯಿ ಹಣ ಕೊಟ್ಟರೂ ನೀವು ಯಾಕೆ ವಿದ್ಯಾರ್ಥಿಗಳ ಬಾಯಿಗೆ ಮಣ್ಣು ಹಾಕುತ್ತಿದ್ದೀರಾ? ವಿದ್ಯಾರ್ಥಿಗಳಿಂದ ಅನ್ನ ಕಸಿದುಕೊಳ್ಳಲು ನಿಮಗೆ ನಾಚಿಕೆಯಾಗುವುದಿಲ್ಲವೇ? ನಿಮ್ಮ ಸ್ವಂತ ಮಕ್ಕಳಿಗೆ ಇದೇ ಕೊಳೆತ ಊಟವನ್ನು ನೀಡುತ್ತೀರಾ?” ಎಂದು ತೀವ್ರ ಆಕ್ರೋಶ ಹೊರಹಾಕಿದರು.

ಅಧಿಕಾರಿಗಳ ಭ್ರಷ್ಟಾಚಾರ ಹಾಗೂ ನಿರ್ಲಕ್ಷ್ಯಕ್ಕೆ ತೀವ್ರ ಕಿಡಿಕಾರಿದ ಶಾಸಕ ಶರಣು ಸಲಗರ, “ನಾಳೆ ಬೆಳಗ್ಗೆ ನಾನೇ ಖುದ್ದಾಗಿ ಹಾಸ್ಟೆಲ್‌ಗೆ ಬರುತ್ತೇನೆ. ವಿದ್ಯಾರ್ಥಿಗಳು ತಂದಿರುವ ಇದೇ ಕಳಪೆ ಊಟವನ್ನು ನೀವು ತಿಂದು ತೋರಿಸಬೇಕು” ಎಂದು ಅಧಿಕಾರಿಗಳಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ. ಅಲ್ಲದೆ, “ಬಡ ವಿದ್ಯಾರ್ಥಿಗಳ ಹೊಟ್ಟೆ ಹೊಡೆಯುತ್ತಿರುವ ನಿಮ್ಮನ್ನು ಅಮಾನತು ಮಾಡುವವರೆಗೂ ನಾನು ವಿಶ್ರಮಿಸುವುದಿಲ್ಲ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರಿ ವಸತಿ ನಿಲಯದಲ್ಲಿ ಕಳಪೆ ಆಹಾರ ಸೇವಿಸಿ ಹೈರಾಣಾಗಿದ್ದ ವಿದ್ಯಾರ್ಥಿಗಳಿಗೆ ಈಗ ಶಾಸಕರ ಬೆಂಬಲ ಸಿಕ್ಕಂತಾಗಿದ್ದು, ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ವಲಯದಲ್ಲಿ ಭಾರೀ ಒತ್ತಾಯ ಕೇಳಿಬರುತ್ತಿದೆ.

#SharanuSalagar #Basavakalyana #HostelScam #BadFoodInHostel #StudentProtest #BidarNews #GovernmentHostel #MLAInAction #FreedomTV #KarnatakaCrimeNews

Comments (0)

Your email address will not be published. Required fields are marked *

Back to top button