KODAGU

ಕುಂಡೆ ಹಬ್ಬವನ್ನು ಸಂಭ್ರಮಿಸಿದ ಕಾಡಿನ ಮಕ್ಕಳು!

Kunde Habba festival by tribals in Kodagu district

ಕೊಡಗು: ಪ್ರಕೃತಿಯ ಮಡಿಲು, ಕಾಫಿಯ ನಾಡು ಕೊಡಗು ಅಂದ್ರೆ ಅದು ವಿವಿಧ ವಿಶಿಷ್ಟ ಸಂಸ್ಕೃತಿಗಳ ಆಗರ. ಹಬ್ಬ ಅಂದ್ರೆ ಹೊಸ ಬಟ್ಟೆ ತೊಟ್ಟು, ದೇವಸ್ಥಾನಕ್ಕೆ ಹೋಗಿ ಶ್ರದ್ಧಾಭಕ್ತಿಯಿಂದ ಪೂಜೆ ಮಾಡುವುದು ವಾಡಿಕೆ. ಆದರೆ ಕೊಡಗಿನ ಗಿರಿಜನರ ಹಬ್ಬಗಳ ಆಚರಣೆಯೇ ವಿಭಿನ್ನ! ಚಿತ್ರವಿಚಿತ್ರ ವೇಷ ಧರಿಸುವುದು, ಸಿಕ್ಕ ಸಿಕ್ಕವರಿಗೆ ಕೆಟ್ಟದಾಗಿ ಬೈಯುವುದು, ದೇವರಿಗೇ ಮನಸೋ ಇಚ್ಛೆ ನಿಂದಿಸುತ್ತಾ ಹಣ ಬೇಡುವುದು ಈ ಕುಂಡೆ ಹಬ್ಬದ ವೈಶಿಷ್ಟ್ಯ.

ವಿಚಿತ್ರ ಸಂಸ್ಕೃತಿಯ ಕುಂಡೆ ಹಬ್ಬ!

ಕೈಯಲ್ಲಿ ಸೋರೆ ಬುರುಡೆ, ಬಾಯಲ್ಲಿ ವಿಚಿತ್ರವಾದ ‘ಕುಂಡೆ ಹಾಡು’, ತಲೆಯಲ್ಲಿ ಮದ್ಯದ ಅಮಲು! ಇದು ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ದೇವರಪುರ ಗ್ರಾಮದಲ್ಲಿ ಜರುಗಿದ ಶ್ರೀ ಅಯ್ಯಪ್ಪ-ಭದ್ರಕಾಳಿ ದೇವರ ವಿಶಿಷ್ಟ ಬೇಡು ಹಬ್ಬದ ದೃಶ್ಯ. ನಾಗರಹೊಳೆ ಮತ್ತು ತಿತಿಮತಿ ಭಾಗದ ಕಾಡಂಚಿನ ಮೂಲನಿವಾಸಿಗಳಾದ ಜೇನುಕುರುಬ, ಬೆಟ್ಟಕುರುಬ ಹಾಗೂ ಎರವ ಜನಾಂಗದ ಗಿರಿಜನರು ಅತ್ಯಂತ ಕಷ್ಟಪಟ್ಟು ಜೀವನ ಸಾಗಿಸುತ್ತಾರೆ. ಇಡೀ ವರ್ಷದಲ್ಲಿ ಈ ಕಾಡಿನ ಮಕ್ಕಳು ಅತೀವ ಸಂತೋಷದ ಮೂಲಕ ಆಚರಿಸುವ ಏಕೈಕ ಹಬ್ಬವೇ ಈ ‘ಕುಂಡೆ ಹಬ್ಬ’.

ಹಣ ನೀಡದಿದ್ದರೆ ಬೈಗುಳದ ಉಡುಗೊರೆ!
ಜಿಲ್ಲೆ ಮಾತ್ರವಲ್ಲದೆ ಹೊರಜಿಲ್ಲೆಗಳಿಂದಲೂ ಸಾವಿರಾರು ಗಿರಿಜನರು ಈ ಹಬ್ಬಕ್ಕೆ ಆಗಮಿಸುತ್ತಾರೆ. ಎರಡು ದಿನಗಳ ಕಾಲ ವಿವಿಧ ಹಾಡಿಗಳಿಂದ ಹೊರಡುವ ಗಿರಿಜನರು ರಸ್ತೆ, ಅಂಗಡಿ-ಮುಂಗಟ್ಟುಗಳಲ್ಲಿ ಸಿಕ್ಕವರ ಬಳಿ ಹಣ ವಸೂಲಿ ಮಾಡುತ್ತಾರೆ. ಒಂದು ವೇಳೆ ಯಾರಾದರೂ ಹಣ ನೀಡಲು ನಿರಾಕರಿಸಿದರೆ, ಅವರ ಮೇಲೆ ಕೆಟ್ಟ ಕೆಟ್ಟ ಬೈಗುಳಗಳ ಮಳೆ ಸುರಿಯುತ್ತದೆ ವಿಶೇಷವೆಂದರೆ, ಈ ಎರಡು ದಿನ ಗಿರಿಜನರು ಯಾರಿಗೆ ಹೇಗೆ ಬೈದರೂ ಯಾರೂ ಕೂಡ ಕೋಪ ಮಾಡಿಕೊಳ್ಳುವುದಿಲ್ಲ. ಹೀಗಾಗಿಯೇ ಇದು ‘ಬೈಗುಳದ ಹಬ್ಬ’ ಎಂದೇ ಪ್ರಖ್ಯಾತಿ ಪಡೆದಿದೆ.

ದೇವರ ಬೈಯುವುದರ ಹಿಂದೆ ಇತಿಹಾಸ
ಈ ಗಿರಿಜನರು ಹೆಚ್ಚಾಗಿ ನಿಂದಿಸುವುದು ಮತ್ತು ಬೈಯುವುದು ತಾವು ಆರಾಧಿಸುವ ಅಯ್ಯಪ್ಪ ದೇವರನ್ನು.ಇದರ ಹಿಂದೆ ಸುಮಾರು 800 ವರ್ಷಗಳ ಪುರಾತನ ಇತಿಹಾಸವಿದೆ. ಪುರಾಣಗಳ ಪ್ರಕಾರ, ಗಿರಿಜನರು ಅಯ್ಯಪ್ಪ ದೇವರೊಂದಿಗೆ ಕಾಡಿಗೆ ತೆರಳಿದಾಗ ಅಲ್ಲಿ ಭದ್ರಕಾಳಿ ದೇವಿಯ ದರ್ಶನವಾಗುತ್ತದೆ. ಈ ಸಂದರ್ಭದಲ್ಲಿ ಅಯ್ಯಪ್ಪ ದೇವರು ತಮ್ಮನ್ನು ನಂಬಿದ ಗಿರಿಜನರನ್ನು ಕಾಡಿನಲ್ಲೇ ಒಂಟಿಯಾಗಿ ಬಿಟ್ಟು ಭದ್ರಕಾಳಿ ದೇವಿಯೊಂದಿಗೆ ಹೊರಟುಹೋಗುತ್ತಾನೆ. ಇದರಿಂದ ಆಕ್ರೋಶಗೊಂಡ ಗಿರಿಜನರು ಅಯ್ಯಪ್ಪ ದೇವರನ್ನು ತೀವ್ರವಾಗಿ ನಿಂದಿಸಲು ಪ್ರಾರಂಭಿಸಿದರು ಎನ್ನಲಾಗಿದೆ.
ಮತ್ತೊಂದು ನಂಬಿಕೆಯ ಪ್ರಕಾರ, ಹಿಂದೆ ಜಮೀನ್ದಾರರು ವರ್ಷವಿಡೀ ಇವರನ್ನು ಬೈದು ದುಡಿಸಿಕೊಳ್ಳುತ್ತಿದ್ದರು. ಅದಕ್ಕೆ ಪ್ರತಿಯಾಗಿ ವರ್ಷಕ್ಕೊಮ್ಮೆ ದೇವರ ಹಬ್ಬದ ನೆಪದಲ್ಲಿ ಜಮೀನ್ದಾರರ ವಿರುದ್ಧದ ಆಕ್ರೋಶವನ್ನು ಬೈಗುಳದ ರೂಪದಲ್ಲಿ ಹೊರಹಾಕುವ ಪದ್ಧತಿ ಇದಾಗಿದೆ. ಕೊನೆಗೆ ವೇಷಧಾರಿಗಳೆಲ್ಲರೂ ದೇವರಪುರದ ಅಯ್ಯಪ್ಪ-ಭದ್ರಕಾಳಿ ದೇವಾಲಯಕ್ಕೆ ಬಂದು ಸೇರುತ್ತಾರೆ. ತಾವು ಸಾರ್ವಜನಿಕರಿಂದ ವಸೂಲಿ ಮಾಡಿದ ಹಣದಲ್ಲಿ ಒಂದಿಷ್ಟನ್ನು ದೇವರಿಗೆ ಭಂಡಾರದ ರೂಪದಲ್ಲಿ ಒಪ್ಪಿಸಿ, “ನಾವು ಬೈದದ್ದು ತಪ್ಪಾಯಿತು, ಕ್ಷಮಿಸು” ಎಂದು ಬೇಡಿಕೊಂಡು ಹಬ್ಬ ಮುಗಿಸುತ್ತಾರೆ.

ಸಂಪ್ರದಾಯ, ಆಚರಣೆ ಏನೇ ಇರಲಿ, ಶತಶತಮಾನಗಳ ಇತಿಹಾಸವಿರುವ ಈ ಅಪರೂಪದ ಬುಡಕಟ್ಟು ಸಂಸ್ಕೃತಿಯನ್ನು ಇಂದಿಗೂ ಜೀವಂತವಾಗಿ ಇಟ್ಟಿರುವುದು ಮತ್ತು ಗಿರಿಜನರು ಉಲ್ಲಾಸದಿಂದ ಕೊಂಡಾಡುವುದೇ ಒಂದು ಸಂತೋಷದ ಸಂಗತಿ.

#FreedomTV #KundeHabba #Kodagu #CoorgDiaries #TribalFestival #KarnatakaCulture #Devarapura #Gonikoppal #Ponnampet #AyyappaBhadrakali #IncredibleKarnataka #TribalTradition #CoorgTourism #KodaguNews #BreakingNews #TrendingKannada #VibrantKarnataka

Comments (0)

Your email address will not be published. Required fields are marked *

Back to top button