‘ಲಕ್ಷ್ಮಿ’ ಹಂಪಿಯ ಮಗಳು ಬಿಡಲೊಲ್ಲೆವು; ಜನತೆಯ ಆಕ್ರೋಶ!
Elephant Lakshmi - People protest on shifting elephant to Kolar

ವಿಜಯನಗರ : ವಿಶ್ವವಿಖ್ಯಾತ ಪ್ರವಾಸಿ ತಾಣ, ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ಹಂಪಿಯ ಶ್ರೀ ವಿರೂಪಾಕ್ಷ ದೇವಾಲಯದ ಸಾಕು ಆನೆ ‘ಲಕ್ಷ್ಮಿ’ ಜನರಿಗೆ ನೆಚ್ಚಿನ ಮಗಳಾಗಿದ್ದಾಳೆ. ಅನಾರೋಗ್ಯದ ನೆಪವೊಡ್ಡಿ ಆನೆಯನ್ನು ಕೋಲಾರಕ್ಕೆ ಸ್ಥಳಾಂತರ ಮಾಡುವ ಜಿಲ್ಲಾಡಳಿತದ ನಿರ್ಧಾರಕ್ಕೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಂಪಿ, ಕಮಲಾಪುರ, ಕಡ್ಡಿರಾಂಪುರ ಸೇರಿದಂತೆ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ವಿರೂಪಾಕ್ಷ ದೇಗುಲದ ಮುಂಭಾಗ ಜಮಾಯಿಸಿ ಆಕ್ರೋಶ ಹೊರಹಾಕಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ನೆಪ ಬೇಡ- ಆನೆ ಹಂಪಿಯ ಸ್ವತ್ತು!
ಹಂಪಿಯ ವಿರೂಪಾಕ್ಷ ದೇಗುಲದ ಆನೆ ‘ಲಕ್ಷ್ಮಿ’ ಕೇವಲ ಒಂದು ಪ್ರಾಣಿಯಲ್ಲ, ಅದು ಈ ಭಾಗದ ಜನರ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಹೆಮ್ಮೆಯಾಗಿದೆ. ಅನಾರೋಗ್ಯದ ನೆಪ ಒಡ್ಡಿ ಏಕಾಏಕಿ ಲಕ್ಷ್ಮಿಯನ್ನು ಕೋಲಾರಕ್ಕೆ ಸ್ಥಳಾಂತರ ಮಾಡುತ್ತಿರುವುದು ಸರಿಯಲ್ಲ. ಮೂರು ತಿಂಗಳ ಚಿಕಿತ್ಸೆ ನೆಪವೊಡ್ಡಿ ಆನೆಯನ್ನುಕರೆದೊಯ್ದು ಮತ್ತೆ ವಾಪಸ್ ಕರೆ ತರ್ತೀರಾ ಅನ್ನೋದಕ್ಕೆ ಏನು ಗ್ಯಾರಂಟಿ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಒಂದು ವೇಳೆ ಆನೆಗೆ ಅನಾರೋಗ್ಯದ ಪರಿಸ್ಥಿತಿ ಇದ್ದರೆ, ತುಂಗಭದ್ರಾ ನದಿ ತಟದ ಮ್ಯಾಂಗ್ಯೋ ಟ್ರೀ ಭಾಗದಲ್ಲಿ ಅತ್ಯಂತ ಪ್ರಕೃತಿ ರಮಣೀಯ ಹಾಗೂ ಉತ್ತಮ ಸ್ಥಳವಿದೆ. ಅಲ್ಲಿಯೇ ಆನೆಗೆ ಬೇಕಾದ ತಜ್ಞ ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಿ, ಇಲ್ಲೇ ಉಳಿಸಿಕೊಳ್ಳಿ ಎಂದು ಜನರು ಒತ್ತಾಯಿಸಿದ್ದಾರೆ. ಹಂಪಿಯ ಲಕ್ಷ್ಮಿಯನ್ನು ಇಲ್ಲೇ ಉಳಿಸಿ ಎಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ದೊಡ್ಡ ಮಟ್ಟದ ಅಭಿಯಾನವನ್ನೇ ಆರಂಭಿಸಿದ್ದಾರೆ. ಸದ್ಯ ಪರಿಸ್ಥಿತಿ ಕೈಮೀರದಂತೆ ತಡೆಯಲು ದೇಗುಲದ ಸುತ್ತಮುತ್ತ ಭಾರಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಚಿಂತಿಸಬೇಡಿ- ಗುಣಮುಖಳಾದೊಡನೆ ಹಂಪಿ ಮಡಿಲಿಗೆ!
ಸ್ಥಳೀಯರ ಆಕ್ರೋಶ ಮತ್ತು ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಅಧಿಕೃತವಾಗಿ ಪ್ರತಿಕ್ರಿಯೆ ನೀಡಿದ್ದು, ಸಾರ್ವಜನಿಕರಲ್ಲಿರುವ ಗೊಂದಲಕ್ಕೆ ತೆರೆ ಎಳೆಯಲು ಯತ್ನಿಸಿದ್ದಾರೆ “ಲಕ್ಷ್ಮಿ ಆನೆಯ ಆರೋಗ್ಯದಲ್ಲಿ ಇತ್ತೀಚೆಗೆ ಏರುಪೇರಾಗಿದೆ. ಆನೆಗೆ ಸೂಕ್ತ ಚಿಕಿತ್ಸೆಯ ಅವಶ್ಯಕತೆ ಇರುವುದರಿಂದ ಹಿರಿಯ ಅಧಿಕಾರಿಗಳ ಸೂಚನೆಯಂತೆ ಕೋಲಾರದಲ್ಲಿರುವ ಆನೆ ಚಿಕಿತ್ಸಾ ಕೇಂದ್ರಕ್ಕೆ ಕಳುಹಿಸಿಕೊಡಲಾಗುತ್ತಿದೆ. ಮೂರು ತಿಂಗಳುಗಳ ಕಾಲ ಅದಕ್ಕೆ ವಿಶೇಷ ಆರೈಕೆ ಮತ್ತು ಚಿಕಿತ್ಸೆಯ ಅಗತ್ಯವಿದೆ. ಆನೆ ಸಂಪೂರ್ಣವಾಗಿ ಗುಣಮುಖವಾದ ನಂತರ ಪುನಃ ಹಂಪಿಗೆ ಕರೆತರಲಾಗುವುದು. ಯಾರೂ ಕೂಡ ಈ ಬಗ್ಗೆ ಅನಗತ್ಯವಾಗಿ ಗಾಬರಿಯಾಗುವ ಅಥವಾ ಆತಂಕ ಪಡುವ ಅವಶ್ಯಕತೆ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಇತಿಹಾಸ ಪ್ರಸಿದ್ಧ ಹಂಪಿಯ ಧಾರ್ಮಿಕ ವಿಧಿವಿಧಾನಗಳಲ್ಲಿ ಲಕ್ಷ್ಮಿ ಆನೆಯ ಪಾತ್ರ ದೊಡ್ಡದಿದೆ. ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರೂ, ಒಮ್ಮೆ ಹೋದ ಆನೆ ವಾಪಸ್ ಬರುವುದಿಲ್ಲ ಎಂಬುದು ಜನರ ತೀವ್ರ ಆತಂಕವಾಗಿದೆ. ಹೀಗಾಗಿ ಸರ್ಕಾರ ಮತ್ತು ಅರಣ್ಯ ಇಲಾಖೆ ಸ್ಥಳೀಯರ ಭಾವನೆಗಳಿಗೆ ಧಕ್ಕೆ ಬಾರದಂತೆ ಪಾರದರ್ಶಕವಾಗಿ ನಡೆದುಕೊಳ್ಳಬೇಕಿದೆ.
#FreedomTV #Hampi #Vijayanagara #HampiElephant #LakshmiElephant #VirupakshaTemple #Hospete #SaveHampiElephant #KolarElephantCenter #Kamalapura #KavithaMannikeri #BreakingNews #KarnatakaNews #SaveLakshmi


