Ballary

ಸರ್ಕಾರಕ್ಕೆ ಜಿಂದಾಲ್‌ ಕೋಟ್ಯಾಂತರ ರೂಪಾಯಿ ವಂಚನೆ- ಭರತ್ ರೆಡ್ಡಿ ಆಕ್ರೋಶ!

JSW Jindal cheats tax money to Local panchayats in Ballari

ಬಳ್ಳಾರಿ: ದೇಶದ ಎರಡನೇ ಅತೀ ದೊಡ್ಡ ಖಾಸಗಿ ವಲಯದ ಉಕ್ಕು ಕಂಪನಿ ಎನ್ನುವ ಹೆಗ್ಗಳಿಕೆಗೆ ಬಳ್ಳಾರಿಯ JSW ಜಿಂದಾಲ್ ಕಾರ್ಖಾನೆ ಪಾತ್ರವಾಗಿದೆ. ಆದರೆ ಕಂಪನಿಯ ಹಸುವಿನ ವೇಷದ ಹೆಬ್ಬುಲಿಯ ಮುಖವಾಡ ಕಳಚಿ ಬಿದ್ದಿದೆ. ಸ್ಥಳೀಯ ಗ್ರಾಮ ಪಂಚಾಯತಿಗಳಿಗೆ ಕೋಟ್ಯಾಂತರ ರೂಪಾಯಿ ತೆರಿಗೆ ಪಾವತಿಸದೇ ವಂಚಿಸುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. 2018 ರಿಂದ ಈವರೆಗೆ ಬರೋಬ್ಬರಿ 20 ಕೋಟಿಗೂ ಅಧಿಕ ರೂಪಾಯಿ ಆಸ್ತಿ ಮತ್ತು ಅಭಿವೃದ್ಧಿ ತೆರಿಗೆಯನ್ನು ಪಾವತಿಸಿಲ್ಲ. ಕೋಟ್ಯಾಂತರ ರೂಪಾಯಿ ಬಾಕಿ ಉಳಿಸಿಕೊಂಡು ಜಿಂದಾಲ್ ಆಡಳಿತ ಮಂಡಳಿ ಗಪ್‌ಚುಪ್ ಕುಳಿತಿದೆ.

ತೆರಿಗೆ ಬಾಕಿ ಕುರಿತು ನೋಟಿಸ್ ನೀಡಿದರೂ ಆಡಳಿತ ಮಂಡಳಿ ಡೋಂಟ್ ಕೇರ್ ಸಂಸ್ಕೃತಿ ತೋರುತ್ತಿದೆ.ಈ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತೋರಣಗಲ್ ಬಳಿ ಸಾವಿರಾರು ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿರುವ JSW ಜಿಂದಾಲ್ ಕಾರ್ಖಾನೆಯಿಂದ ತೆರಿಗೆ ವಸೂಲಿ ಮಾಡಲು ಸ್ಥಳೀಯ ಆಡಳಿತ ವ್ಯವಸ್ಥೆ ತೀವ್ರ ಸರ್ಕಸ್ ನಡೆಸುವಂತಾಗಿದೆ.

ಮೂರು ಪಂಚಾಯತಿಗಳಿಗೆ ಪಂಗನಾಮ!


1994ರಲ್ಲಿ ತೋರಣಗಲ್ ಬಳಿ ವಿಜಯನಗರ ಸ್ಟೀಲ್ ಲಿಮಿಟೆಡ್ ಹೆಸರಲ್ಲಿ ಸ್ಥಾಪಿತವಾಗಿ, ಪ್ರಸ್ತುತ ಕಬ್ಬಿಣ, ಸಿಮೆಂಟ್, ಪೇಂಟ್ ಸೇರಿ ಹಲವು ಉದ್ಯಮಗಳನ್ನು ನಡೆಸುತ್ತಿರುವ JSW ಸಮೂಹ ಸಂಸ್ಥೆಯು ತೋರಣಗಲ್ಲು, ವಡ್ಡು ಹಾಗೂ ಬನ್ನಿಹಟ್ಟಿ ಗ್ರಾಮ ಪಂಚಾಯತಿಗಳಿಗೆ ಕೋಟ್ಯಾಂತರ ರೂಪಾಯಿ ತೆರಿಗೆಯನ್ನು ನೀಡಬೇಕಿದೆ.ಈ ಮೂರು ಪಂಚಾಯತಿಗಳ ವ್ಯಾಪ್ತಿಯಲ್ಲಿ ಲಾಭದಾಯಕ ಉದ್ದಿಮೆ ನಡೆಸುತ್ತಿದ್ದರೂ, ನಿಯಮಾನುಸಾರ ಕಟ್ಟಬೇಕಾದ ತೆರಿಗೆಯನ್ನು ಮಾತ್ರ ಕಟ್ಟುತ್ತಿಲ್ಲ.ಇದರಿಂದ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ.ಬಾಕಿ ಇರುವ ತೆರಿಗೆಯನ್ನು ತಕ್ಷಣ ಪಾವತಿಸುವಂತೆ ಸ್ಥಳೀಯ ಗ್ರಾಮ ಪಂಚಾಯತಿಗಳು ಹಾಗೂ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಹಲವು ಬಾರಿ ನೋಟಿಸ್ ನೀಡಿದ್ದರೂ ಜಿಂದಾಲ್ ಆಡಳಿತ ಮಂಡಳಿ ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಇದು ಈಗ ಸ್ಥಳೀಯ ಆಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಶಾಸಕ ನಾರಾ ಭರತ್ ರೆಡ್ಡಿ ತೀವ್ರ ಆಕ್ರೋಶ!
ಜಿಂದಾಲ್ ಸಂಸ್ಥೆಯ ಈ ಬೇಜವಾಬ್ದಾರಿತನದ ವಿರುದ್ಧ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಜಿಂದಾಲ್ ಕಾರ್ಖಾನೆಯವರು ಸ್ಥಳೀಯ ನಿರುದ್ಯೋಗಿ ಯುವಕರಿಗೆ ಉದ್ಯೋಗವನ್ನೂ ನೀಡುತ್ತಿಲ್ಲ. ಇತ್ತ ಸ್ಥಳೀಯ ಪಂಚಾಯತಿಗಳಿಗೆ ನಿಯಮದ ಪ್ರಕಾರ ಬರಬೇಕಾದ ಕೋಟ್ಯಾಂತರ ರೂಪಾಯಿ ತೆರಿಗೆಯನ್ನೂ ಪಾವತಿ ಮಾಡುತ್ತಿಲ್ಲ ಅಂದ್ರೆ ಹೇಗೆ? ಜಿಂದಾಲ್ ಸಂಸ್ಥೆಯ ಈ ಧೋರಣೆ ಹಾಗೂ ಕಾರ್ಯವೈಖರಿಯನ್ನು ನಾನು ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಸಾವಿರಾರು ಕೋಟಿ ಲಾಭ ಗಳಿಸುತ್ತಿರುವ ಈ ಜಿಂದಾಲ್ ಉದ್ಯಮ, ಗ್ರಾಮೀಣ ಭಾಗದ ಅಭಿವೃದ್ಧಿಗೆ ಬಳಕೆಯಾಗಬೇಕಾದ ತೆರಿಗೆ ಹಣವನ್ನು ಹಲವಾರು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.

#JSWJindal #Ballari #TaxEvasion #Sandur #NaraBharatReddy #Toranagallu #GramPanchayat #JSWSteel #KarnatakaNews #BreakingNews #FreedomTV

Comments (0)

Your email address will not be published. Required fields are marked *

Back to top button