Ballaryಕ್ರೈಂ ಸ್ಟೋರಿ

ಪ್ರೀತಿಸಿ ಮದುವೆ-ವರದಕ್ಷಿಣೆಗೆ ಆತ್ಮಹತ್ಯೆ!

Married woman suicide due to Dowry

ಬಳ್ಳಾರಿ : “ಕೈಹಿಡಿದವ ಕೊನೆಯವರೆಗೂ ಹೆಗಲಾಗಿರುತ್ತಾನೆ, ಬಾಳಿಗೆ ನೆರಳಾಗುತ್ತಾನೆ” ಎಂದು ನಂಬಿ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಯುವತಿಯೊಬ್ಬಳು, ವಿವಾಹವಾದ ಎರಡೇ ವರ್ಷಕ್ಕೆ ದುರಂತ ಅಂತ್ಯ ಕಂಡಿರುವ ಘಟನೆ ಗಣಿನಾಡು ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ನಡೆದಿದೆ. ಗಂಡ ಹಾಗೂ ಅತ್ತೆಯ ಅಮಾನವೀಯ ಕಿರುಕುಳ ಮತ್ತು ವರದಕ್ಷಿಣೆ ಕಿರುಕುಳಕ್ಕೆ ನರಳಿ ನರಳಿ ಅಮಾಯಕ ಹೆಣ್ಣು ಅಸು ನೀಗಿದ್ದಾಳೆ.ಕಂಪ್ಲಿ ನಿವಾಸಿಯಾದ ಐಶ್ವರ್ಯ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಕಂಪ್ಲಿ ಪೊಲೀಸರು ಆರೋಪಿ ಗಂಡ ಹಾಗೂ ಆತನ ತಾಯಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಮೊದಲು ಪ್ರೀತಿ ನಂತರ ನರಕ!


ಮೃತ ಐಶ್ವರ್ಯ ಮನೆ ಪಕ್ಕದಲ್ಲಿ ಎರಡು ವರ್ಷಗಳ ಹಿಂದೆ ಪಶುಸಂಗೋಪನೆ ಇಲಾಖೆಯ ವೈದ್ಯ ಪ್ರದೀಪ್ ಕುಮಾರ್ ಎಂಬಾತ ಬಾಡಿಗೆಗೆ ನೆಲೆಸಿದ್ದನು. ಈ ವೇಳೆ ಇಬ್ಬರ ನಡುವೆ ಬೆಳೆದ ಸ್ನೇಹ ಪ್ರೀತಿಗೆ ತಿರುಗಿತ್ತು.ಆತನ ಬಣ್ಣದ ಮಾತಿಗೆ ಮರುಳಾದ ಐಶ್ವರ್ಯ,ಪ್ರಾಣಕ್ಕಿಂತ ಹೆಚ್ಚಾಗಿ ಆತನನ್ನು ಪ್ರೀತಿಸಿದ್ದಳು.ನಂತರ ಇಬ್ಬರು ಪರಸ್ಪರ ಒಪ್ಪಿ 2025ರಲ್ಲಿ ರಿಜಿಸ್ಟರ್ ಮದುವೆ ಆಗಿದ್ದರು. ಆದರೆ, ಮದುವೆಯಾಗಿ ಹೊಸ ಮನೆಗೆ ಹೆಜ್ಜೆ ಇಡುತ್ತಿದ್ದಂತೆಯೇ ಐಶ್ವರ್ಯ ಪಾಲಿಗೆ ಖುಷಿ ಎಂಬುದು ಕಣ್ಮರೆಯಾಗಿ,ನರಕಯಾತನೆ ಆರಂಭವಾಗಿತ್ತು.

ಅತ್ತೆ ರಾಕ್ಷಸಿ- ತಾಳಕ್ಕೆ ತಕ್ಕಂತೆ ಕುಣಿದ ಗಂಡ!
ಮದುವೆಯಾದ ಕೆಲವೇ ದಿನಗಳಲ್ಲಿ ಅತ್ತೆ ಸೊಸೆಯ ಪಾಲಿಗೆ ಹೆಮ್ಮಾರಿಯಾಗಿದ್ದಾಳೆ. ಗಂಡ ಪ್ರದೀಪ್ ಕೂಡ ಹೆಂಡತಿಯ ಪರ ನಿಲ್ಲದೆ ತಾಯಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಚಿತ್ರಹಿಂಸೆ ನೀಡಲು ಶುರು ಮಾಡಿದ್ದನು. “ಇವತ್ತು ಸರಿ ಹೋಗಬಹುದು, ನಾಳೆ ಬದಲಾಗಬಹುದು” ಎಂದು ದಿನ ದೂಡುತ್ತಿದ್ದ ಐಶ್ವರ್ಯಗೆ ಕಿರುಕುಳದ ಪ್ರಮಾಣ ಹೆಚ್ಚುತ್ತಲೇ ಇತ್ತು.

ಮಗ ಸರ್ಕಾರಿ ನೌಕರ; ನೀನೇನು ತಂದೆ!
“ಅವರು ನನ್ನ ತಂಗಿಗೆ ವಿಪರೀತ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ‘ನೀನು ಮದುವೆಯಾಗಿ ಬಂದಾಗ ದುಡ್ಡು, ಚಿನ್ನ ಏನನ್ನೂ ತಂದಿಲ್ಲ. ನನ್ನ ಮಗನಿಗೆ ಸರ್ಕಾರಿ ಕೆಲಸ ಇದೆ, ನೀನು ಮಾತ್ರ ಬರೀ ಕೈಲಿ ಬಂದಿದ್ದೀಯಾ’ ಎಂದು ದಿನವೂ ಚುಚ್ಚಿ ಮಾತನಾಡುತ್ತಿದ್ದರು. ದಿನವಿಡೀ ಮನೆ ಕೆಲಸ ಮಾಡಿದರೂ ಆಕೆಗೆ ಸರಿಯಾಗಿ ಊಟ ಕೊಡುತ್ತಿರಲಿಲ್ಲ. ಹುಷಾರಿಲ್ಲ ಅಂದ್ರೂ ಆಸ್ಪತ್ರೆಗೆ ತೋರಿಸಲು ಬಿಡದೆ ಕ್ರೂರವಾಗಿ ವರ್ತಿಸುತ್ತಿದ್ದರು. ” ಎಂದು ಮೃತಳ ತಂಗಿ ಗಂಭೀರ ಆರೋಪ ಮಾಡಿದ್ದಾರೆ.

ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ!
ಗಂಡ ಹಾಗೂ ಅತ್ತೆಯ ದಿನನಿತ್ಯದ ನರಕಯಾತನೆ ಸಹಿಸಲಾರದೆ ಐಶ್ವರ್ಯ ಕೊನೆಗೂ ಸಾಯುವ ಕಠಿಣ ನಿರ್ಧಾರ ಕೈಗೊಂಡಿದ್ದಾಳೆ. ಕೊನೆಯ ಕ್ಷಣದಲ್ಲಿ ಹೆತ್ತವರನ್ನು ನೋಡಬೇಕೆನಿಸಿ ತನ್ನ ತವರು ಮನೆಗೆ ಬಂದವಳು,ಅಲ್ಲಿಯೇ ಗಂಡ ಮತ್ತು ಅತ್ತೆಯ ಕ್ರೌರ್ಯದ ಬಗ್ಗೆ ‘ಡೆತ್‌ನೋಟ್’ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ.ಘಟನೆಗೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರು ಕಂಪ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಪೊಲೀಸರು, ಪಶುವೈದ್ಯ ಪ್ರದೀಪ್ ಕುಮಾರ್ ಹಾಗೂ ಆತನ ತಾಯಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.ಪ್ರೀತಿಸಿದ ಹುಡುಗನೇ ರಾಕ್ಷಸನಾಗಿ ಅಮಾಯಕ ಜೀವವೊಂದನ್ನು ಬಲಿಪಡೆದಿರುವುದು ಇಡೀ ಕಂಪ್ಲಿ ಭಾಗದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸಮಾಜವನ್ನು ಸುಡುತ್ತಿರುವ ಈ ‘ವರದಕ್ಷಿಣೆ’ ಎಂಬ ಮಹಾ ಪೀಡೆ ತೊಲಗುದೆಂದು. ಈ ನಮ್ಮ ಸಮಾಜ ಹೆಣ್ಣು ಗಂಡು ಸಮಾನರು ಎಂದು ಹೇಳುತ್ತೆ ಆದ್ರೆ ಇಂತಹ ಘಟನೆಗಳು ನಡೆದರೆ ಮೌನ ವಹಿಸುತ್ತದೆ. ಸಮಾಜ ಸುಧಾರಣೆ ಎಂದೋ ಕಾದು ನೋಡಬೇಕಿದೆ.

#FreedomTV #BallariNews #KampliCrime #DowryHarassment #SuicideCase #JusticeForAishwarya #LoveMarriageTragedy #DomesticViolence #GovernmentDoctorArrested #BallariPolice #StopDowry #KannadaNews

Comments (0)

Your email address will not be published. Required fields are marked *

Back to top button