BELAGAVI

ಡ್ಯಾಂ ಕೊಟ್ಟ ರೈತರಿಗೇ ನೀರಿಲ್ಲ-ರೈತರ ಬೃಹತ್ ಧರಣಿ ಸತ್ಯಾಗ್ರಹ!

farmers Protest for Water facility from hidkal damb in hukkeri

ಹುಕ್ಕೇರಿ: ನಮ್ಮ ತಾಲೂಕಿನಲ್ಲಿ ಎರಡು ಜಲಾಶಯಗಳಿವೆ, ಮೂರು ನದಿಗಳು ಹರಿಯುತ್ತಿವೆ.ಆದರೂ ನಮ್ಮ ಜಮೀನುಗಳು ಒಣಗುತ್ತಿವೆ” ಎನ್ನುತ್ತಾ ಆಕ್ರೋಶ ಹೊರಹಾಕಿದ ಹುಕ್ಕೇರಿ ತಾಲೂಕಿನ ನೂರಾರು ರೈತರು, ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಪಟ್ಟಣದ ಕೋರ್ಟ್ ಸರ್ಕಲ್ ಬಳಿ ಬೃಹತ್ ಧರಣಿ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಈ ಪಕ್ಷಾತೀತ, ಧರ್ಮಾತೀತ ಹೋರಾಟ ನಡೆಯುತ್ತಿದ್ದು, ಸರ್ಕಾರ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತ್ಯಾಗ ಮಾಡಿದ ನಮಗೆ ಅನ್ಯಾಯ, ಬೇರೆಯವರಿಗೆ ನೀರು- ರೈತರ ಕಿಡಿ!
ಹಿಡಕಲ್ ಜಲಾಶಯ ನಿರ್ಮಾಣಕ್ಕಾಗಿ ಹುಕ್ಕೇರಿ ತಾಲೂಕಿನ ಜನ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿದ್ದಾರೆ.ಈ ಜಲಾಶಯದ ನೀರು ವಿಜಯಪುರ,ಬಾಗಲಕೋಟೆವರೆಗೂ ತಲುಪುತ್ತಿದೆ. ಆದರೆ,ಸ್ವತಃ ಜಲಾಶಯವಿರುವ ತಾಲೂಕಿನ ರೈತರಿಗೆ ಮಾತ್ರ ನೀರು ಸಿಗುತ್ತಿಲ್ಲ.ಇದೇ ಸಂದರ್ಭದಲ್ಲಿ, ಹಿಡಕಲ್ ಜಲಾಶಯದ ನೀರನ್ನು ಧಾರವಾಡದ ಕೈಗಾರಿಕಾ ಪ್ರದೇಶಕ್ಕೆ ಕೊಂಡೊಯ್ಯಲು ಜಲಸಂಪನ್ಮೂಲ ಸಚಿವರು ಮುಂದಾಗಿರುವುದಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. “ಮೊದಲು ನಮ್ಮ ಭಾಗದ ಜನರ ಸಂಕಷ್ಟಕ್ಕೆ ಸ್ಪಂದಿಸಿ, ಇಲ್ಲವಾದರೆ ಧಾರವಾಡಕ್ಕೆ ನೀರು ಕೊಂಡೊಯ್ಯಲು ಹಾಕಲಾಗಿರುವ ಪೈಪ್‌ಲೈನ್‌ಗಳನ್ನು ಒಡೆದು ಹಾಕುತ್ತೇವೆ” ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ರೈತರ ಪ್ರಮುಖ ಬೇಡಿಕೆಗಳು!
ಕೊಟಬಾಗಿ, ದಡ್ಡಿ, ಕೋಚರಿ, ಕುರಣಿ ಯೋಜನೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು, ಘಟಪ್ರಭಾ ಬಲದಂಡೆ ಹಾಗೂ ಎಡದಂಡೆ ಕಾಲುವೆಗಳನ್ನು ತಕ್ಷಣವೇ ದುರಸ್ತಿಗೊಳಿಸಬೇಕು. ಈ ಮೂಲಕ ತಾಲ್ಲೂಕಿನ ಕೊನೆಯ ಭಾಗದ ರೈತರಿಗೂ ನೀರು ಸಿಗುವಂತೆ ಮಾಡಬೇಕು.ಅಡವಿಸಿದ್ದೇಶ್ವರ ಹಾಗೂ ಶಂಕರಲಿಂಗ ಏತ ನೀರಾವರಿ ಯೋಜನೆಗಳನ್ನು ಕೂಡಲೇ ಪ್ರಾರಂಭಿಸಬೇಕು.ಮಲ್ಲಿಕಾರ್ಜುನ ಏತ ನೀರಾವರಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು.ಅಮ್ಮಣಗಿ,ಕಣಗಲಾ ಸೇರಿದಂತೆ ತಾಲೂಕಿನ 60 ಗ್ರಾಮಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ. ಈ ಸಮಸ್ಯೆ ಮೊದಲು ಪರಿಹಾರವಾಗಬೇಕು.ನಿಗದಿತ ಕಾಲಮಿತಿಯಲ್ಲಿ ಕೆರೆ ತುಂಬಿಸುವ ಯೋಜನೆಗಳನ್ನು ಜಾರಿಗೆ ತರಬೇಕು.

“ಇದು ನಮ್ಮ ಬದುಕಿನ ಹೋರಾಟ”
“ಹುಕ್ಕೇರಿ ತಾಲೂಕಿನ ಜನರು ಭೂಮಿ ಕಳೆದುಕೊಂಡು ಜಲಾಶಯ ಕಟ್ಟಲು ಕಾರಣರಾದರು.ಆದರೆ ಇಂದು ಅವರಿಗೆ ಕುಡಿಯಲು ನೀರಿಲ್ಲದಿರುವುದು ವಿಪರ್ಯಾಸ. ರಾಜಕೀಯ ಮಾಡೋದನ್ನು ಬಿಟ್ಟು ಎಲ್ಲರೂ ಒಗ್ಗಟ್ಟಾಗಿ ಈ ನೀರಾವರಿ ಹೋರಾಟಕ್ಕೆ ಕೈಜೋಡಿಸಬೇಕು.” ಎಂದು ಶಶಿಕಾಂತ ಗುರೂಜಿ (ಕಾರ್ಯಾಧ್ಯಕ್ಷರು) ಮತ್ತು ಚೂನಪ್ಪಾ ಪೂಜೇರಿ (ರಾಜ್ಯಾಧ್ಯಕ್ಷರು,ರೈತ ಸಂಘ) ಹೇಳಿದರು. ಈ ಬೃಹತ್ ಧರಣಿ ಸತ್ಯಾಗ್ರಹದಲ್ಲಿ ಹುಣಶಿಕೊಳ್ಳಮಠದ ಸಿದ್ಧಬಸವ ದೇವರು,ಮಾಜಿ ಸಂಸದ ರಮೇಶ ಕತ್ತಿ,ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ,ಉಪಾಧ್ಯಕ್ಷ ಅಜೀತ ಮುನ್ನೋಳಿ,ಹಿರಿಯ ಮುಖಂಡರಾದ ಅಜ್ಜಪ್ಪ ಕಲ್ಲಟ್ಟಿ,ಸತ್ಯಪ್ಪಾ ಮಲ್ಲಾಪೂರೆ, ದುಂಡನಗೌಡ ಪಾಟೀಲ ಸೇರಿದಂತೆ ಸಾವಿರಾರು ರೈತರು ಹಾಗೂ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ತಾಲೂಕಿನ ನೀರಾವರಿ ಹಕ್ಕಿಗಾಗಿ ಧ್ವನಿ ಎತ್ತಿದ್ದಾರೆ.

#FreedomTV #HukkeriFarmersProtest HidkalDam #SaveHukkeriFarmers #IrrigationProjects #KarnatakaFarmers #RaithaSangha #HasiruSene #NorthKarnatakaWaterCrisis #GhataprabhaRiver #FarmersAgitation #KannadaNews #WaterForFarmers

Comments (0)

Your email address will not be published. Required fields are marked *

Back to top button