
ಕಲಬುರಗಿ: ನಗರದಲ್ಲಿ ಭಾನುವಾರ ತಡರಾತ್ರಿ ನಡೆದಿದ್ದ ನಿವೃತ್ತ ಬಿಎಸ್ಎಫ್ (BSF) ಯೋಧ ಹಾಗೂ ಸೆಕ್ಯೂರಿಟಿ ಗಾರ್ಡ್ ರವಿಚಂದ್ರ ಅವರ ಕೊಲೆ ಪ್ರಕರಣವನ್ನು ಸ್ಟೇಷನ್ ಬಜಾರ್ ಠಾಣೆಯ ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಭೇದಿಸಿದ್ದಾರೆ. ವಿಶೇಷವೆಂದರೆ, ಕೊಲೆ ನಡೆದಿರುವ ಸಂಗತಿ ಜನತೆಗೆ ತಿಳಿಯುವ ಮೊದಲೇ ಕೊಲೆ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಚಿನ್ ಮತ್ತು ಹಣಮಂತ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇವರಿಂದ ರವಿಚಂದ್ರ ಅವರ ಲೈಸೆನ್ಸ್ಡ್ ಗನ್ ಹಾಗೂ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಗುಂಡು ಪಾರ್ಟಿಯ ನಂತರ ಕೊಲೆ!
ಕಲಬುರಗಿ ನಗರದ ರಾಮಮಂದಿರ ಬಳಿಯಿರುವ ವಿವಾದಿತ ಸ್ಥಳವೊಂದರಲ್ಲಿ ನಿವೃತ್ತ ಯೋಧ ರವಿಚಂದ್ರ ಹಾಗೂ ಆರೋಪಿ ಸಚಿನ್ ಸೆಕ್ಯೂರಿಟಿ ಗಾರ್ಡ್ಗಳಾಗಿ ಕೆಲಸಕ್ಕೆ ಸೇರಿದ್ದರು. ಭಾನುವಾರ ರಾತ್ರಿ ಇವರಿಬ್ಬರ ಜೊತೆಗೆ ಮತ್ತೊಬ್ಬ ಆರೋಪಿ ಹಣಮಂತ ಸೇರಿಕೊಂಡು ಅದೇ ಸ್ಥಳದಲ್ಲಿ ‘ಎಣ್ಣೆ ಪಾರ್ಟಿ’ ಮಾಡಿದ್ದರು. ಮದ್ಯಪಾನ ಮಾಡುವಾಗ ರವಿಚಂದ್ರ ಮತ್ತು ಸಚಿನ್ ನಡುವೆ ಸಣ್ಣ ವಿಷಯಕ್ಕೆ ಗಲಾಟೆ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ತಿರುಗಿದಾಗ, ಆಕ್ರೋಶಗೊಂಡ ಸಚಿನ್ ಅಲ್ಲೇ ಇದ್ದ ಕಬ್ಬಿಣದ ರಾಡ್ನಿಂದ ರವಿಚಂದ್ರ ಅವರ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ರವಿಚಂದ್ರ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಕೊಲೆಯನ್ನು ಮುಚ್ಚಿಡಲು ಮಾಡಿದ ಮಾಸ್ಟರ್ ಪ್ಲಾನ್ ಫ್ಲಾಪ್!
ಕೊಲೆಯ ನಂತರ ಈ ಇಬ್ಬರು ಆರೋಪಿಗಳು ಸಿಕ್ಕಿಬೀಳುವ ಭಯದಿಂದ ರವಿಚಂದ್ರ ಅವರ ಬಳಿಯಿದ್ದ ಲೈಸೆನ್ಸ್ಡ್ ಗನ್ ಮತ್ತು ಬೈಕ್ ತೆಗೆದುಕೊಂಡು ಓಡಿಹೋಗಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಈ ನಿಟ್ಟಿಲ್ಲಿ ಸಚಿನ್ ನಡು ಮಧ್ಯರಾತ್ರಿ ಎರಡು ಬೈಕ್ಗಳನ್ನು ಒಂದೇ ಬಾರಿಗೆ ಕೊಂಡೊಯ್ಯಲು ಒಂದು ವಿಚಿತ್ರ ಪ್ಲಾನ್ ಮಾಡಿದ್ದನು.ಒಂದು ಬೈಕ್ ಸ್ವಲ್ಪ ದೂರ ಚಲಾಯಿಸಿಕೊಂಡು ಹೋಗಿ ನಿಗದಿತ ಸ್ಥಳದಲ್ಲಿ ನಿಲ್ಲಿಸಿ ಪುನಃ ವಾಪಸ್ ನಟರಾಜ ಸರ್ವೀಸ್ ಮಾಡಿಕೊಂಡು ಬಂದು ಎರಡನೇ ಬೈಕ್ ಅನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ದೃಶ್ಯಗಳು ಗಮನಕ್ಕೆ ಬಂದಿವೆ.
ಖಾಕಿಯ ಹದ್ದಿನ ಕಣ್ಣಿಗೆ ಬಿದ್ದ ಆರೋಪಿ!
ಮಧ್ಯರಾತ್ರಿಯಲ್ಲಿ ವ್ಯಕ್ತಿಯೊಬ್ಬ ಪದೇ ಪದೇ ಹೀಗೆ ಬೈಕ್ ಬದಲಾಯಿಸುತ್ತಾ ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಆ ಭಾಗದಲ್ಲಿ ನೈಟ್ ರೌಂಡ್ಸ್ ಕರ್ತವ್ಯದಲ್ಲಿದ್ದ ಪೊಲೀಸರು ಗಮನಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಸಚಿನ್ನನ್ನು ತಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಪೊಲೀಸರ ಖಡಕ್ ವಿಚಾರಣೆಯ ವೇಳೆ ತಬ್ಬಿಬ್ಬಾದ ಆರೋಪಿ, ತಾನು ಮಾಡಿದ್ದ ಕೊಲೆಯ ರಹಸ್ಯವನ್ನು ತಡಬಡಾಯಿಸಿಕೊಂಡು ಹೇಳಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಟೇಷನ್ ಬಜಾರ್ ಪೊಲೀಸರು ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಸಾರ್ವಜನಿಕರಿಗೆ ಕೊಲೆಯ ಸುಳಿವು ಸಿಗುವ ಮುನ್ನವೇ, ರಾತ್ರಿ ಗಸ್ತಿನ ಪೊಲೀಸರ ಸಮಯಪ್ರಜ್ಞೆ ಮತ್ತು ಚಾಣಾಕ್ಷತನದಿಂದಾಗಿ ಈ ರೋಚಕ ಕೊಲೆ ಪ್ರಕರಣ ಕೆಲವೇ ಗಂಟೆಗಳಲ್ಲಿ ಬಯಲಿಗೆ ಬಂದಂತಾಗಿದೆ. ಏನೇ ಆದರೂ ಪ್ರಸ್ತುತ ಸಮಾಜದಲ್ಲಿ ಕ್ಷುಲ್ಲಕ ಕಾರಣಗಳು ಹಾಗೂ ಮನಸ್ತಾಪಗಳಿಗೆ ಅಪರಾಧ ಚಟುವಟಿಕೆಗಳು ನಡೆಯುತ್ತಿದ್ದು ಹಲವಾರು ಘಟನೆಗಳು ಕೊಲೆಯಲ್ಲಿ ಮುಕ್ತಾಯಗೊಳ್ಳುತ್ತಿರುವುದು ನಾಗರಿಕ ಸಮಾಜಕ್ಕೆ ಒಂದು ಸವಾಲಾಗಿದೆ.
#Kalaburagi #KalaburagiCrime #MurderCase #PoliceAlert #NightRoundsPolice #StationBazarPolice #CrimeNews #BSFExServiceman #BreakingNews #KarnatakaPolice #FreedomWebsite




