
ಡೆಹ್ರಾಡೂನ್: ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ, ಭಾರತೀಯ ಜನತಾ ಪಕ್ಷದ (BJP) ಹಿರಿಯ ಧುರೀಣ ಹಾಗೂ ನಿವೃತ್ತ ಮೇಜರ್ ಜನರಲ್ ಭುವನ್ ಚಂದ್ರ ಖಂಡೂರಿ ವಿಧಿವಶರಾಗಿದ್ದಾರೆ. 91 ವರ್ಷ ವಯಸ್ಸಿನ ಬಿ.ಸಿ. ಖಂಡೂರಿ ಅವರು ದೀರ್ಘಕಾಲದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ಖಚಿತಪಡಿಸಿವೆ. ಅತ್ಯಂತ ಸೌಮ್ಯ ಸ್ವಭಾವದ ರಾಜಕಾರಣಕ್ಕೆ ಹೆಸರಾದ ಇವರ ನಿಧನಕ್ಕೆ ದೇಶಾದ್ಯಂತ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸೇನೆಯಿಂದ ರಾಜಕೀಯಕ್ಕೆ ‘ಜನರಲ್ ಸಾಬ್’ ನಡೆದು ಬಂದ ಹಾದಿ!
ಭಾರತೀಯ ಸೇನೆಯ ಇಂಜಿನಿಯರಿಂಗ್ ವಿಭಾಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದ ಬಿ. ಸಿ. ಖಂಡೂರಿ ಅವರು ಮೇಜರ್ ಜನರಲ್ ಆಗಿ ನಿವೃತ್ತರಾಗಿದ್ದರು. ಸೇನೆಯಲ್ಲಿದ್ದಾಗ ಅವರ ಅತ್ಯುತ್ತಮ ಸೇವೆಗಾಗಿ ಕೇಂದ್ರ ಸರ್ಕಾರ ‘ಅತಿ ವಿಶಿಷ್ಟ ಸೇವಾ ಪದಕ’ ನೀಡಿ ಗೌರವಿಸಿತ್ತು.
ಮಿಲಿಟರಿ ವೃತ್ತಿಜೀವನದ ಬಳಿಕ ರಾಜಕೀಯ ರಂಗಕ್ಕೆ ಪ್ರವೇಶಿಸಿದ ಖಂಡೂರಿ ಅವರು,ಪೌರಿ ಗರ್ವಾಲ್ ಕ್ಷೇತ್ರದಿಂದ ಲೋಕಸಭೆಗೆ ಹಲವು ಬಾರಿ ಆಯ್ಕೆಯಾಗಿದ್ದರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿ ದೇಶದ ಹೆದ್ದಾರಿಗಳ ಅಭಿವೃದ್ಧಿಗೆ, ಅದರಲ್ಲೂ ಪ್ರಮುಖವಾಗಿ ‘ಚಿನ್ನದ ಚತುಷ್ಕೋನ ರಸ್ತೆ ಯೋಜನೆ’ಗೆ ಕ್ಷಿಪ್ರ ವೇಗ ನೀಡಿದ ಕೀರ್ತಿ ಇವರಿಗಿದೆ.
ಭ್ರಷ್ಟಾಚಾರದ ವಿರುದ್ಧ ಹೋರಾಡಿದ ಶಿಸ್ತಿನ ಸಿಪಾಯಿ
ಉತ್ತರಾಖಂಡ ರಾಜ್ಯದ ರಾಜಕೀಯದಲ್ಲಿ ಅತ್ಯಂತ ಪ್ರಾಮಾಣಿಕ ಮತ್ತು ಕಳಂಕರಹಿತ ನಾಯಕ ಎಂದೇ ಹೆಸರಾಗಿದ್ದ ಬಿ. ಸಿ. ಖಂಡೂರಿ ಅವರು ರಾಜ್ಯದಲ್ಲಿ ಎರಡು ಅವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪ್ರಥಮವಾಗಿ 2007 ರಿಂದ 2009 ರವರೆಗೆ 2ನೇ ಬಾರಿಗೆ 2011 ರಿಂದ 2012 ರವರೆಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ತಮ್ಮ ಅಧಿಕಾರಾವಧಿಯಲ್ಲಿ ಆಡಳಿತದಲ್ಲಿ ಪಾರದರ್ಶಕತೆ ತರಲು ಹಾಗೂ ಭ್ರಷ್ಟಾಚಾರದ ವಿರುದ್ಧ ಕಠಿಣ ಕಾನೂನುಗಳನ್ನು ಜಾರಿಗೆ ತರಲು ಅವರು ತೀವ್ರವಾಗಿ ಶ್ರಮಿಸಿದ್ದರು. ರಾಜ್ಯದಲ್ಲಿ ಪ್ರಬಲ ‘ಲೋಕಾಯುಕ್ತ’ ಸಂಸ್ಥೆಯ ಸ್ಥಾಪನೆಗೆ ಅಡಿಪಾಯ ಹಾಕಿದ್ದು ಇವರೇ. ಈ ಸಾಧನೆ ಇವರ ಆಡಳಿತದಲ್ಲಿ ಪ್ರಮುಖ ಮೈಲಿಗಲ್ಲಾಗಿ ನಿಂತಿದೆ.
ರಾಜ್ಯಕ್ಕೆ ತುಂಬಲಾರದ ನಷ್ಟ -ಸಿಎಂ ಪುಷ್ಕರ್ ಸಿಂಗ್ ಧಾಮಿ
ಖಂಡೂರಿ ಅವರ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿರುವ ಉತ್ತರಾಖಂಡದ ಪ್ರಸ್ತುತ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, “ಜನರಲ್ ಖಂಡೂರಿ ಅವರ ನಿಧನವು ಕೇವಲ ಉತ್ತರಾಖಂಡಕ್ಕೆ ಮಾತ್ರವಲ್ಲ,ಇಡೀ ರಾಷ್ಟ್ರೀಯ ರಾಜಕೀಯಕ್ಕೆ ತುಂಬಲಾಗದ ನಷ್ಟ” ಎಂದು ವಿಷಾದಿಸಿದ್ದಾರೆ.”ಭಾರತೀಯ ಸೇನೆಯಲ್ಲಿನ ತಮ್ಮ ಅಧಿಕಾರಾವಧಿಯಲ್ಲಿ ಖಂಡೂರಿ ಅವರು ರಾಷ್ಟ್ರೀಯ ಸೇವೆ, ಶಿಸ್ತು ಮತ್ತು ಸಮರ್ಪಣೆಗೆ ಅಪ್ರತಿಮ ಉದಾಹರಣೆ. ಮಿಲಿಟರಿ ವೃತ್ತಿಜೀವನದಿಂದ ಸಾರ್ವಜನಿಕ ಜೀವನದವರೆಗೆ ಅವರ ಸಂಪೂರ್ಣ ವ್ಯಕ್ತಿತ್ವವು ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಾರ್ವಜನಿಕ ಸೇವೆಗೆ ಅಚಲವಾಗಿ ಸಮರ್ಪಿತವಾಗಿತ್ತು. ಸರಳತೆ ಮತ್ತು ಪ್ರಾಮಾಣಿಕ ಕಾರ್ಯವೈಖರಿಯಿಂದ ಅವರು ಜನರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದರು” ಎಂದು ಸಿಎಂ ಧಾಮಿ ಕಂಬನಿ ಮಿಡಿದಿದ್ದಾರೆ. ಗೌರವಾನ್ವಿತ ನಾಯಕನ ಅಗಲಿಕೆಗೆ ಉತ್ತರಾಖಂಡ ಸರ್ಕಾರವು ಮೂರು ದಿನಗಳ ರಾಜ್ಯದಲ್ಲಿ ಶೋಕಾಚರಣೆ ಘೋಷಿಸಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಹರಿದ್ವಾರದಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ.
#BCKhanduri #Uttarakhand #FormerCM #BJP #IndianArmy #MajorGeneral #Dehradun #PushkarSinghDhami #NationalPolitics #RIPKhanduriJi #FreedomTV #BreakingNews




