chitradurgaಕ್ರೈಂ ಸ್ಟೋರಿ

ಮಕ್ಕಳ ಮೇಲೆ ಅಮಾನಷ ದೌರ್ಜನ್ಯ-ನೌಕರನ ವಿರುದ್ಧ ಎಫ್‌ಐಆರ್!

Sirigere Mutt hostel employ beats students in hostel

ಚಿತ್ರದುರ್ಗ: ಪೋಷಕರು ತಮ್ಮ ಮಕ್ಕಳನ್ನು ಮಠ-ಮಾನ್ಯಗಳಿಗೆ ಬಿಡುವುದು ಮಕ್ಕಳು ವಿದ್ಯಾವಂತರಾಗಿ ಒಳ್ಳೆ ಸಂಸ್ಕಾರ, ಜೀವನದ ಮೌಲ್ಯಗಳನ್ನು ರೂಪಿಸಿಕೊಂಡು ಬದುಕು ಕಟ್ಟಿಕೊಳ್ಳಲೆಂದು. ಆದರೆ ಮಠವನ್ನೇ ದೇಗುಲವೆಂದು ನಂಬಿ ಮಕ್ಕಳನ್ನು ಬಿಟ್ಟು ಹೋದ ಹೆತ್ತವರ ಎದೆಯುರಿಯುವ ಭೀಕರ ಘಟನೆಯೊಂದು ಕೋಟೆನಾಡು ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ. ಸಿರಿಗೆರೆ ಮಠದ ಹಾಸ್ಟೆಲ್​​ವೊಂದರಲ್ಲಿ ಪುಟ್ಟ ಮಕ್ಕಳನ್ನು ಮನಸೋಇಚ್ಛೆ ಥಳಿಸಿ, ಕಾಲಿನಿಂದ ತುಳಿದು ಸಿಬ್ಬಂದಿಯೊಬ್ಬ ವಿಕೃತಿ ಮೆರೆದಿರುವ ಅಮಾನುಷ ದೃಶ್ಯಾವಳಿಗಳು ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಬಿಟ್ಟುಬಿಡಿ ಸಾರ್’ ಎಂದು ಕಣ್ಣೀರಿಟ್ಟ ವಿದ್ಯಾರ್ಥಿ; ಥಳಿಸಿದ ಪಾಪಿ!


ಚಿತ್ರದುರ್ಗದ ಪ್ರಸಿದ್ಧ ಮಠ ಸಿರಿಗೆರೆ ಮಠದ ಹಾಸ್ಟೆಲ್ ನಲ್ಲಿ ಈ ಘೋರ ದೌರ್ಜನ್ಯ ನಡೆದಿದೆ. ಹಾಸ್ಟೆಲ್ ನೌಕರ ರವಿಚಂದ್ರ ಎಂಬಾತ ತಪ್ಪು ಮಾಡದ ಮುಗ್ಧ ಮಕ್ಕಳ ಮೇಲೆ ರೌದ್ರಾವತಾರ ತಾಳಿ ಹಲ್ಲೆ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಮಕ್ಕಳನ್ನು ನೆಲಕ್ಕೆ ಹಾಕಿ ಕಾಲಿನಿಂದ ತುಳಿದು, ಗೋಡೆಗೆ ಮಕ್ಕಳ ತಲೆಯನ್ನು ಜೋರಾಗಿ ಗುದ್ದಿ ಅಕ್ಷರಸಃ ರಾಕ್ಷಸನಂತೆ ವರ್ತಿಸಿದ್ದಾನೆ. “ದಯವಿಟ್ಟು ಬಿಟ್ಟುಬಿಡಿ ಸಾರ್” ಎಂದು ಮಕ್ಕಳು ಕೈಮುಗಿದು ಗೋಗರೆದರೂ, ಕಣ್ಣೀರು ಹಾಕಿದರೂ ಕಿಂಚಿತ್ತೂ ಕರುಣೆ ತೋರಿಸದೆ ಕ್ರೌರ್ಯ ಮೆರೆದಿದ್ದಾನೆ.

‘ಫ್ರೀಡಂ ಟಿವಿ’ ವರದಿ ಬೆನ್ನಲ್ಲೇ ಅಧಿಕಾರಿಗಳು ಅಲರ್ಟ್!
ಹಾಸ್ಟೆಲ್ ಸಿಬ್ಬಂದಿಯ ಈ ಅಮಾನೂಷ ವಿಕೃತಿಯ ದೃಶ್ಯಗಳನ್ನು ‘ಫ್ರೀಡಂ ಟಿವಿ’ ವಿಶೇಷ ವರದಿಯ ಮೂಲಕ ಸಮಾಜದ ಮುಂದೆ ತೆರೆದಿಟ್ಟಿತ್ತು. ಸುದ್ದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳ ಪಡೆ ತಕ್ಷಣವೇ ಅಲರ್ಟ್ ಆಗಿದೆ. ಚಿತ್ರದುರ್ಗ ಡಿವೈಎಸ್ಪಿ ಅರುಣ್ ನಾಗೇಗೌಡ, ಪಿಐ ಪ್ರಸಾದ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ (DD) ವಿಜಯ್ ಕುಮಾರ್ ಅವರು ಜಂಟಿಯಾಗಿ ಸ್ಥಳಕ್ಕೆ ಭೇಟಿ ನೀಡಿ ಕಟ್ಟುನಿಟ್ಟಿನ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಡಿಡಿ ವಿಜಯ್ ಕುಮಾರ್, “ಮಕ್ಕಳ ಮೇಲೆ ನಡೆದಿರುವ ದೌರ್ಜನ್ಯ ಅಕ್ಷಮ್ಯ. ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದರು.

ಫ್ರೀಡಂ ಟಿವಿ ವರದಿಗೆ ಬಿಗ್ ಇಂಪ್ಯಾಕ್ಟ್- ಆರೋಪಿ ವಿರುದ್ಧ ಕೇಸ್ ದಾಖಲು!
ವರದಿ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ಇಲಾಖೆ ಹಾಗೂ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಮಕ್ಕಳ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಹೆಡ್ಡ ನೌಕರ ರವಿಚಂದ್ರ ವಿರುದ್ಧ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಾಗಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮಂಜುನಾಥ್ ಅವರು ನೀಡಿದ ದೂರಿನನ್ವಯ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮಕ್ಕಳಿಗೆ ವಿದ್ಯಾ-ಬುದ್ಧಿ ಕಲಿಸಬೇಕಾದ ಮಠದ ಆವರಣದಲ್ಲೇ ಇಂತಹ ರಾಕ್ಷಸೀ ಪ್ರವೃತ್ತಿಯ ಸಿಬ್ಬಂದಿ ಅಡಗಿ ಕುಳಿತಿರುವುದು ಪೋಷಕರಲ್ಲಿ ಭೀತಿ ಮೂಡಿಸಿದ್ದು,ಈತನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

#Chitradurga #HostelHorror #ChildAbuse #FreedomTVImpact #BharamasagaraPolice #CrimeNews #KarnatakaNews #LokaSpandana #BreakingNews #FreedomTV #KannadaNews

Comments (0)

Your email address will not be published. Required fields are marked *

Back to top button