
ಮುಂಬೈ: ಬಾಲಿವುಡ್‌ನ ‘ಎವರ್‌ಗ್ರೀನ್ ಯಂಗ್‌ಮನ್’ ಎಂದೇ ಹೆಸರಾದ ನಟ ಅನಿಲ್ ಕಪೂರ್ ಹಾಗೂ ಅವರ ಧರ್ಮಪತ್ನಿ ಸುನಿತಾ ಕಪೂರ್ ತಮ್ಮ ದಾಂಪತ್ಯ ಜೀವನದ 42ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮಿಸಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ತಮ್ಮ ಸುದೀರ್ಘ 53 ವರ್ಷಗಳ ಒಡನಾಟದ ಸುಂದರ ನೆನಪುಗಳನ್ನು ಹಂಚಿಕೊಂಡಿರುವ ಅನಿಲ್ ಕಪೂರ್, ತಮ್ಮ ಮದುವೆ ಎಷ್ಟು ಸರಳವಾಗಿತ್ತು ಎಂಬುದನ್ನು ನೆನೆದು ಭಾವುಕರಾಗಿದ್ದಾರೆ.

ಎಂದಿನಂತೆ ಈ ಬಾರಿಯೂ ಪತ್ನಿಗಾಗಿ ಇನ್‌ಸ್ಟಾಗ್ರಾಂನಲ್ಲಿ ಅಪರೂಪದ ಚಿತ್ರಗಳನ್ನು ಹಂಚಿಕೊಂಡಿರುವ ಅನಿಲ್ ಕಪೂರ್, ಹೃದಯಸ್ಪರ್ಶಿ ಬರಹವೊಂದನ್ನು ಬರೆದು ತಮ್ಮ ಪ್ರೀತಿಯನ್ನು ಇಡೀ ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ.
30 ನಿಮಿಷ ಭೇಟಿ; 53 ವರ್ಷಗಳ ಬದುಕು!
ತಮ್ಮ ಪೋಸ್ಟ್‌ನಲ್ಲಿ ಮದುವೆಯ ದಿನವನ್ನು ನೆನಪಿಸಿಕೊಂಡ ಅನಿಲ್ ಕಪೂರ್, “42 ವರ್ಷದ ವಿವಾಹ ಜೀವನ, 53 ವರ್ಷದ ಜೊತೆಯಾಟ. ಆದರೆ ಪ್ರತಿ ವರ್ಷವೂ ಹಿಂದಿನ ವರ್ಷಕ್ಕಿಂತ ಹೆಚ್ಚು ವಿಶೇಷವಾಗುತ್ತಿರುವುದೇ ವಿಶೇಷ. ನಮ್ಮ ಮದುವೆ ಬಹಳ ಸರಳವಾಗಿತ್ತು, ಕೇವಲ 30 ನಿಮಿಷಗಳಲ್ಲಿ ಮುಗಿದುಹೋಗಿತ್ತು. ಹನಿಮೂನ್ ಇರಲಿಲ್ಲ ಯಾವುದೇ ಆರ್ಭಟವೂ ಇರಲಿಲ್ಲ. ನಮ್ಮ ತಂದೆ-ತಾಯಿ, ಕೆಲವೇ ಪ್ರಮುಖ ಆಪ್ತರು ಮತ್ತು ನಾವು ಇಬ್ಬರು ಮಾತ್ರ ಇದ್ದೆವು. ಅಂದು ಕೇವಲ 30 ನಿಮಿಷಗಳಲ್ಲಿ ಮುಗಿದ ಮದುವೆ, ಇಂದು 53 ವರ್ಷಗಳ ಸುಂದರ ಬದುಕಾಗಿ ರೂಪಾಂತರಗೊಳ್ಳುತ್ತದೆ ಎಂದು ನಾನು ಊಹಿಸಿರಲಿಲ್ಲ,” ಎಂದು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಮುಂದುವರೆದು ಪತ್ನಿಯ ತ್ಯಾಗವನ್ನು ಕೊಂಡಾಡಿದ ಅವರು, “ನನ್ನ ಪ್ರತಿಯೊಂದು ಕನಸಿನ ಹಿಂದೆ ನೀನೇ ಇದ್ದೆ.ನಾನು ಧೈರ್ಯವಾಗಿ ಸಾಹಸ ಮಾಡಲು,ಸಿನಿಮಾಗಳಲ್ಲಿ ನಟಿಸಲು ಕಾರಣವೇ ನೀನು. ಯಾಕೆಂದರೆ ಮನೆಯ ಎಲ್ಲ ಜವಾಬ್ದಾರಿಗಳನ್ನು ನೀನು ಪ್ರೀತಿ ಮತ್ತು ಶಾಂತಿ ಸಮಾಧಾನದಿಂದ ನಿಭಾಯಿಸುತ್ತಿದ್ದೆ. ಇಷ್ಟು ವರ್ಷಗಳ ಕಾಲ ಪ್ರತಿದಿನವೂ ನನ್ನನ್ನು ನಿನ್ನವನನ್ನಾಗಿ ಆರಿಸಿಕೊಂಡಿದ್ದಕ್ಕಾಗಿ ಧನ್ಯವಾದಗಳು ನನ್ನ ಅತ್ಯುತ್ತಮ ಸ್ನೇಹಿತೆ,ಸಂಗಾತಿ ಮತ್ತು ನನ್ನೆಲ್ಲವೂ ಆದ ನಿನಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು” ಎಂದು ಹೇಳಿದ್ದಾರೆ.
ಪ್ರ್ಯಾಂಕ್ ಕಾಲ್‌ನಿಂದ ಶುರು-1984 ಎ ಲವ್ ಸ್ಟೋರಿ!
ಅನಿಲ್ ಕಪೂರ್ ಮತ್ತು ಸುನಿತಾ ಅವರ ಪ್ರೇಮಕಥೆ ಸಿನಿಮಾ ಕಥೆಗಿಂತ ಕಡಿಮೆಯಿರಲಿಲ್ಲ. 1973ರಲ್ಲಿ ಅನಿಲ್ ಕಪೂರ್ ಚಿತ್ರರಂಗದಲ್ಲಿ ಚಾನ್ಸ್‌ಗಾಗಿ ಅಲೆಯುತ್ತಿದ್ದಾಗ, ಗೆಳೆಯನೊಬ್ಬನ ಮೂಲಕ ಸುನಿತಾ ಪರಿಚಯವಾಗಿತ್ತು. ಆಗ ಸುನಿತಾ ಯಶಸ್ವಿ ಮಾಡೆಲ್ ಆಗಿದ್ದರು. ಕೇವಲ ಒಂದು ‘ಪ್ರ್ಯಾಂಕ್ ಕಾಲ್’ (Prank Call) ಮೂಲಕ ಲ್ಯಾಂಡ್‌ಲೈನ್ ಫೋನ್‌ನಲ್ಲಿ ಆರಂಭವಾದ ಇವರ ಮಾತುಕತೆ,ನಂತರ ಸ್ನೇಹವಾಗಿ,ಕ್ರಮೇಣ ಪ್ರೀತಿಯಾಗಿ ಬದಲಾಯಿತು.ಮದುವೆಗೂ ಮುನ್ನ ಇಬ್ಬರೂ ಬರೋಬ್ಬರಿ 10 ರಿಂದ 11 ವರ್ಷಗಳ ಕಾಲ ಪ್ರೀತಿಸುತ್ತಿದ್ದರು. ತಮ್ಮ ಮೊದಲ ಸಿನಿಮಾಗೆ ಸಹಿ ಹಾಕಿದ ಮರುದಿನವೇ ಅನಿಲ್ ಕಪೂರ್ ಸುನಿತಾಗೆ ಪ್ರಪೋಸ್ ಮಾಡಿ,ತಕ್ಷಣವೇ ಮದುವೆಯಾಗಿದ್ದರು.
ಹೋಟೆಲ್ ಬಿಲ್ ಕಟ್ಟಲಾಗದಿದ್ದಾಗ ಸುನಿತಾ ನೆರವು!
ತಮ್ಮ ಕಷ್ಟದ ದಿನಗಳನ್ನು ನೆನಸಿಕೊಂಡ ಅನಿಲ್ ಕಪೂರ್, “ಒಂದು ಕಾಲದಲ್ಲಿ ನನಗೆ ಹೋಟೆಲ್ ಬಿಲ್ ಕಟ್ಟಲು ಸಹ ಸಾಧ್ಯವಾಗುತ್ತಿರಲಿಲ್ಲ.ಆಗ ಸುನಿತಾ ಯಾರಿಗೂ ಗೊತ್ತಾಗದಂತೆ ತಾವೇ ಹಣ ಕೊಟ್ಟು ಬಿಲ್ ಪಾವತಿಸುತ್ತಿದ್ದರು” ಎಂದಿದ್ದಾರೆ. ಅಲ್ಲದೆ, ತಾನು ಹೊರಾಂಗಣ ಶೂಟಿಂಗ್ ನಲ್ಲಿದ್ದಾಗ ತನ್ನ ತಾಯಿಯನ್ನು ಸ್ವಂತ ತಾಯಿಯಂತೆ ನೋಡಿಕೊಂಡಿದ್ದನ್ನು ಕೊಂಡಾಡಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ, “ನಾನು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾಗ ಸುನಿತಾ ಒಬ್ಬರೇ ‘ಸಿಂಗಲ್ ಪೇರಂಟ್’ ತರಹ ಮಕ್ಕಳನ್ನು ಜವಾಬ್ದಾರಿಯಿಂದ ಬೆಳೆಸಿದರು. ತಂದೆಯಾಗಿ ನಾನು ಇನ್ನು ಹೆಚ್ಚಿನ ಸಮಯ ಕೊಡಬೇಕಿತ್ತು” ಎಂದು ಪತ್ನಿಯ ಶ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಹಣ, ಅಂತಸ್ತುವಿಲ್ಲದ ಕಾಲದಿಂದ ಹಿಡಿದು ಇಂದಿನ ಯಶಸ್ಸಿನ ಘಟ್ಟದವರೆಗೂ ಅನಿಲ್ ಗೆ ಬೆನ್ನೆಲುಬಾಗಿ ನಿಂತಿರುವ ಸುನಿತಾ ಹಾಗೂ ಅನಿಲ್ ಕಪೂರ್ 53 ವರ್ಷಗಳ ಅಪೂರ್ವ ಪ್ರೇಮಕಾವ್ಯ ಇಂದಿನ ತಲೆಮಾರಿನ ಜೋಡಿಗಳಿಗೆ ನಿಜಕ್ಕೂ ದೊಡ್ಡ ಪ್ರೇರಣೆಯಾಗಿದೆ.
#AnilKapoor #SunitaKapoor #WeddingAnniversary #42YearsOfTogetherness #BollywoodCouples #AnilKapoorLoveStory #EvergreenCouple #BollywoodNews #RelationshipGoals #FreedomTV #KannadaNews




