
ಮೈಸೂರು: ಹೆತ್ತ ತಾಯಿಯ ನಡತೆಯ ಮೇಲೆ ಅನುಮಾನಗೊಂಡು, ಆಕೆಯನ್ನು ಮಗನೇ ಅತ್ಯಂತ ಕ್ರೂರವಾಗಿ ಅಮ್ಮನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ, ತೋಟದಲ್ಲಿ ಹೆಣ ಸುಟ್ಟು ಹಾಕಿರುವ ಭೀಕರ ಘಟನೆ ಮೈಸೂರು ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಮಾದಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಕೃತ್ಯಕ್ಕೆ ತಂದೆಯು ಸಹಕರಿಸಿದ್ದು, ಹೆಣ ಸುಟ್ಟು ಸಾಕ್ಷಿ ನಾಶಕ್ಕೆ ತಂದೆ-ಮಗ ಯತ್ನಿಸಿದ್ದು ಈಗ ಅವರನನು ಪೊಲೀಸ್ ವಶಕ್ಕೆ ಪಡೆದಿದ್ದಾರೆ.

ವಿಡಿಯೋದಿಂದ ಶುರುವಾದ ಕೌಟುಂಬಿಕ ಕಲಹ!
ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಮಲ್ಲಿಕಾರ್ಜುನ್ ಬಾಲದಂಡಿ ಅವರು ಸುದ್ದಿಗೋಷ್ಠಿಯಲ್ಲಿ ನೀಡಿರುವ ಮಾಹಿತಿ ಪ್ರಕಾರ, ಮೂರು ತಿಂಗಳ ಹಿಂದೆ ಸುಧಾ ಮೈಸೂರಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಜೊತೆ ಬೈಕ್‌ನಲ್ಲಿ ತೆರಳುತ್ತಿರುವುದನ್ನು ಗ್ರಾಮಸ್ಥರೊಬ್ಬರು ವಿಡಿಯೋ ಮಾಡಿ ಮಗ ಶಿವರುದ್ರಪ್ಪನಿಗೆ ಕಳುಹಿಸಿದ್ದರು.ಇದನ್ನು ನೋಡಿ ಕೋಪಗೊಂಡ ಮಗ “ಈ ವಯಸ್ಸಿನಲ್ಲಿ ಇದೆಲ್ಲಾ ಬೇಕಾ?” ಎಂದು ತಾಯಿಗೆ ಬುದ್ಧಿಮಾತು ಹೇಳಿದ್ದ. ಆದರೂ, ಸುಧಾ ಅವರ ನಡತೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿರಲಿಲ್ಲ ಎನ್ನಲಾಗಿದೆ. ಇದರಿಂದಾಗಿ ಕುಟುಂಬದಲ್ಲಿ ನಿರಂತರ ಜಗಳ ನಡೆಯುತ್ತಲೇ ಇತ್ತು.
ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ ಕಲ್ಲು ಹಾಕಿ ಕೊಲೆ!
ಕಳೆದ ಸೋಮವಾರ ಬೆಳಿಗ್ಗೆ ತಾಯಿ ಸುಧಾ ಬೇರೊಬ್ಬರ ಬೈಕ್‌ನಲ್ಲಿ ತೆರಳುತ್ತಿದ್ದದ್ದನ್ನು ಮಗ ಶಿವರುದ್ರಪ್ಪ ಕಣ್ಣಾರೆ ಕಂಡಿದ್ದ.ಇದರಿಂದ ಆಕ್ರೋಶಗೊಂಡ ಆತ ತಾಯಿಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದ.ಹಲ್ಲೆಗೊಳಗಾಗಿದ್ದ ಸುಧಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಂಬಂಧಿಕರು ಮುಂದಾದಾಗ, ಅಡ್ಡಬಂದ ಶಿವರುದ್ರಪ್ಪ “ನಾನೇ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ” ಎಂದು ಹೇಳಿ ಕರೆದೊಯ್ದಿದ್ದಾನೆ.ಆದರೆ, ದಾರಿ ಮಧ್ಯೆ ಕಣಿಯನಹುಂಡಿ ಸಮೀಪದ ತೋಟವೊಂದರ ಬಳಿ ಮತ್ತೊಮ್ಮೆ ತಾಯಿಯ ಮೇಲೆ ಹಲ್ಲೆ ನಡೆಸಿ, ತಲೆಯ ಮೇಲೆ ಕಲ್ಲು ಹಾಕಿ ಭೀಕರವಾಗಿ ಹತ್ಯೆ ಮಾಡಿದ್ದಾನೆ.
ಸಾಕ್ಷಿ ನಾಶಕ್ಕೆ ಶವ ಸುಟ್ಟ ಪಾಪಿಗಳು!
ಕೊಲೆಯಾದ ನಂತರ ವಿಷಯ ತಿಳಿದ ತಂದೆ ನಂಜುಂಡಪ್ಪ ಹಾಗೂ ಚಿಕ್ಕಪ್ಪನ ಮಕ್ಕಳು ಸೇರಿ,ಯಾರಿಗೂ ಹತ್ಯೆಯ ವಿಚಾರ ತಿಳಿಯಬಾರದು ಎಂಬ ಉದ್ದೇಶದಿಂದ ತೋಟದಲ್ಲಿ ಸೌದೆ ಹಾಕಿ ಸುಧಾ ಅವರ ಶವವನ್ನು ಸುಟ್ಟು ಹಾಕಿದ್ದಾರೆ. ಗ್ರಾಮಸ್ಥರಿಂದ ಮಾಹಿತಿ ಬಂದ ತಕ್ಷಣ ಸರ್ಕಲ್ ಇನ್ಸ್‌ಪೆಕ್ಟರ್ ಜಯಪ್ರಕಾಶ್ ಮತ್ತು ತಂಡ ಸ್ಥಳಕ್ಕೆ ಧಾವಿಸಿ, ಉರಿಯುತ್ತಿದ್ದ ಬೆಂಕಿಯನ್ನು ಆರಿಸಿ ತನಿಖೆ ಕೈಗೊಂಡಿದ್ದಾರೆ. ಸುಧಾ ಅವರ ನಿವಾಸದ ಬಳಿ ರಕ್ತದ ಕಲೆಗಳು ಪತ್ತೆಯಾಗಿದ್ದು,ವ್ಯವಸ್ಥಿತ ತನಿಖೆಯ ಬಳಿಕ ಕೊಲೆ ರಹಸ್ಯ ಬಯಲಾಗಿದೆ.
ಪ್ರಕರಣದಲ್ಲಿ ಒಟ್ಟು ನಾಲ್ಕು ಜನ ಆರೋಪಿಗಳಿದ್ದು, ಈಗಾಗಲೇ ಪ್ರಮುಖ ಆರೋಪಿ ಶಿವರುದ್ರಪ್ಪ ಹಾಗೂ ತಂದೆ ನಂಜುಂಡಪ್ಪನನ್ನು ಜಯಪುರ ಪೊಲೀಸರು ಬಂಧಿಸಿದ್ದಾರೆ.ತಲೆಮರೆಸಿಕೊಂಡಿರುವ ಉಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಎಸ್‌ಪಿ ಮಲ್ಲಿಕಾರ್ಜುನ್ ಬಾಲದಂಡಿ ತಿಳಿಸಿದ್ದಾರೆ.
#Mysuru #MotherMurder #CrimeNews #MysuruPolice #JayapuraStation #FamilyCrime #BreakingNews #KarnatakaCrime #FreedomTV #KannadaNews




