ಮಕ್ಕಳು ಮಾಡಿ, ಬಂಪರ್ ಬಹುಮಾನ ಗೆಲ್ಲಿ – ಚಂದ್ರಬಾಬು ನಾಯ್ಡು!
Make children and get reward by CM chandrababu Naidu

ಅಮರಾವತಿ/ಶ್ರೀಕಾಕುಳಂ: ದಕ್ಷಿಣ ಭಾರತದ ರಾಜ್ಯಗಳಲ್ಲಿ ಜನನ ಪ್ರಮಾಣ ಕುಸಿಯುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಜನಸಂಖ್ಯೆ ಹೆಚ್ಚಳಕ್ಕಾಗಿ ಹಾಗೂ ಮಕ್ಕಳ ಜನನ ಪ್ರಮಾಣದಲ್ಲಿ ಹೆಚ್ಚಳ ಮಾಡಲು ಒಂದು ವಿಶಿಷ್ಟ ಹಾಗೂ ಮಹತ್ವದ ಯೋಜನೆಯನ್ನು ಘೋಷಿಸಿದ್ದಾರೆ. ಮೂರನೇ ಮತ್ತು ನಾಲ್ಕನೇ ಮಗುವನ್ನು ಪಡೆಯುವ ದಂಪತಿಗಳಿಗೆ ಭಾರಿ ಮೊತ್ತದ ಪ್ರೋತ್ಸಾಹಧನ ನೀಡುವುದಾಗಿ ಆದೇಶ ಪ್ರಕಟಿಸಿದ್ದಾರೆ.

ಪ್ರೋತ್ಸಾಹಧನ ಮೊತ್ತ ಎಷ್ಟು?
ಶ್ರೀಕಾಕುಳಂ ಜಿಲ್ಲೆಯ ನರ್ಸನ್ನಪೇಟದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಸಿಎಂ ನಾಯ್ಡು, ಈ ಬಂಪರ್ ಯೋಜನೆಯನ್ನು ಘೋಷಿಸಿದ್ದಾರೆ.ಜನರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಚಂದ್ರಬಾಬು ನಾಯ್ಡು ಯಾರು ಮೂರನೇ ಮಗು ಹೆರುತ್ತಾರೋ ಅವರಿಗೆ 30,000 ರೂಪಾಯಿ ,ನಾಲ್ಕನೇ ಮಗು ಹೆರುವವರಿಗೆ 40,000 ರೂಪಾಯಿ ಪ್ರೋತ್ಸಾಹಧನ ನೀಡಲಾಗುವುದು ಎಂಬ ವಿನೂತನ ಯೋಜನೆ ಘೋಷಿಸಿದ್ದಾರೆ.
“ಮಕ್ಕಳು ದೇಶದ ಆಸ್ತಿ, ಹೊರೆಯಲ್ಲ” ಎಂದ CM!
“ಒಂದು ಕಾಲದಲ್ಲಿ ನಾನು ಕುಟುಂಬ ನಿಯೋಜನೆ ಮತ್ತು ಜನಸಂಖ್ಯೆ ನಿಯಂತ್ರಣಕ್ಕಾಗಿ ಕೆಲಸ ಮಾಡಿದ್ದೆ. ಆದರೆ ಇಂದಿನ ಪರಿಸ್ಥಿತಿ ಬದಲಾಗಿದೆ. ರಾಜ್ಯದಲ್ಲಿ ಜನನ ಪ್ರಮಾಣ ಕುಸಿಯುತ್ತಿರುವುದು ಆತಂಕಕಾರಿ. ಮಕ್ಕಳು ದೇಶದ ಮೇಲೆ ಹೊರೆಯಲ್ಲ, ಅವರೇ ನಿಜವಾದ ಸಂಪತ್ತು,” ಎಂದು ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.ಹಳೆಯ ನೀತಿಗಳಿಗೆ ತಿಲಾಂಜಲಿ-ಹಿಂದಿನ ಆಡಳಿತಾವಧಿಯಲ್ಲಿ ಜಾರಿಯಲ್ಲಿದ್ದ ‘ಸಣ್ಣ ಕುಟುಂಬ’ದ ನೀತಿಗಳನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಹೇಳಿದ ಅವರು, ಕೆಲವು ಪ್ರಮುಖ ಬದಲಾವಣೆಗಳ ಬಗ್ಗೆ ಪ್ರಸ್ತಾಪಿಸಿದರು.
ಹಿಂದೆ ಐದು ಸದಸ್ಯರ ಕುಟುಂಬಕ್ಕೆ 25 ಕೆಜಿ ಅಕ್ಕಿ ಮಾತ್ರ ನೀಡಲಾಗುತ್ತಿತ್ತು.ಇನ್ನು ಮುಂದೆ ಪ್ರತಿ ವ್ಯಕ್ತಿಗೆ 5 ಕೆಜಿಯಂತೆ, 10 ಮಂದಿ ಇದ್ದರೆ 50 ಕೆಜಿ ಅಕ್ಕಿ ನೀಡುವ ವ್ಯವಸ್ಥೆ ಜಾರಿಗೆ ತರಲಾಗುವುದು. ಇದರಿಂದ ಪಡಿತರ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ಆಗಲಿದೆ.
ಚುನಾವಣಾ ನಿಯಮ: ಈ ಹಿಂದೆ ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದವರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವಂತಿರಲಿಲ್ಲ. ಈ ಕಾನೂನನ್ನು ಈಗಾಗಲೇ ರದ್ದುಗೊಳಿಸಲಾಗಿದೆ. “ಮುಂದೊಂದು ದಿನ ಇಬ್ಬರಿಗಿಂತ ಕಡಿಮೆ ಮಕ್ಕಳಿದ್ದವರನ್ನು ಅನರ್ಹಗೊಳಿಸುವ ಕಾನೂನು ತರುವ ಪರಿಸ್ಥಿತಿ ಬಂದರೂ ಬರಬಹುದು,” ಎಂದು ನಾಯ್ಡು ಮಾರ್ಮಿಕವಾಗಿ ನುಡಿದರು.
ದಕ್ಷಿಣ ಭಾರತದ ಜನಸಂಖ್ಯಾ ಬಿಕ್ಕಟ್ಟು
ದಕ್ಷಿಣ ಭಾರತದ ರಾಜ್ಯಗಳಲ್ಲಿ ವಯಸ್ಸಾದವರ ಸಂಖ್ಯೆ ಹೆಚ್ಚುತ್ತಿದ್ದು,ಯುವಜನರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭವಿಷ್ಯದ ಶ್ರಮಶಕ್ತಿ ಮತ್ತು ಪ್ರಾದೇಶಿಕ ಪ್ರಾತಿನಿಧ್ಯದ ದೃಷ್ಟಿಯಿಂದ ಜನಸಂಖ್ಯೆ ವೃದ್ಧಿ ಅತ್ಯಗತ್ಯ ಎಂದು ಚಂದ್ರಬಾಬು ನಾಯ್ಡು ಪ್ರತಿಪಾದಿಸಿದ್ದಾರೆ. “ಹೆಚ್ಚು ಮಕ್ಕಳನ್ನು ಪಡೆಯುವುದು ಕೇವಲ ಕುಟುಂಬದ ವೈಯಕ್ತಿಕ ಆಯ್ಕೆಯಲ್ಲ, ಅದು ಸಮಾಜ ಮತ್ತು ದೇಶಕ್ಕೆ ಮಾಡುವ ಸೇವೆ,” ಎಂದು ಅವರು ಕರೆ ನೀಡಿದ್ದಾರೆ.
#FreedomTV #ChandrababuNaidu #AndhraPradesh #PopulationGrowth #IncentiveScheme #SouthIndiaPopulation #BreakingNews #PDSUpdate #FamilyPlanning #AndhraNews #ಚಂದ್ರಬಾಬುನಾಯ್ಡು #ಆಂಧ್ರಪ್ರದೇಶ #ಜನಸಂಖ್ಯೆ #ಹೊಸಯೋಜನೆ #ಸುದ್ದಿವಾರ್ತೆ




