ಜಯಂ ರವಿ ಭಾವುಕ-ವಿಚ್ಛೇದನ ಸಿಗುವವರೆಗೆ ಸಿನಿಮಾ ಮಾಡಲ್ಲ!
Jayam Ravi press meet on Divorce issue counter by ex wife Aarati Ravi

ಚೆನ್ನೈ: ಕಾಲಿವುಡ್ ನಟ ಜಯಂ ರವಿ ಅವರ ಖಾಸಗಿ ಬದುಕು ಈಗ ಬೀದಿಗೆ ಬಂದಿದೆ. ಕಳೆದ ಕೆಲವು ದಿನಗಳಿಂದ ವಿಚ್ಛೇದನದ ವಿಚಾರವಾಗಿ ಸುದ್ದಿಯಲ್ಲಿದ್ದ ರವಿ, ಇಂದು ಚೆನ್ನೈನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅತ್ಯಂತ ಭಾವುಕರಾಗಿ ಮತ್ತು ಆಕ್ರೋಶಭರಿತರಾಗಿ ಮಾತನಾಡಿದ್ದಾರೆ. “ನನಗೆ ನ್ಯಾಯ ಸಿಗುವವರೆಗೆ ನಾನು ಬಣ್ಣ ಹಚ್ಚುವುದಿಲ್ಲ” ಎಂದು ಘೋಷಿಸುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

14 ವರ್ಷ ನಾನು ಗುಲಾಮನಾಗಿದ್ದೆ!
ಸುದ್ದಿಗೋಷ್ಠಿಯಲ್ಲಿ ಕಿರುಚಾಡುತ್ತಲೇ ತಮ್ಮ ನೋವನ್ನು ಹೊರಹಾಕಿದ ಜಯಂ ರವಿ, ಪತ್ನಿ ಆರತಿ ಅವರ ಹೆಸರನ್ನು ಉಲ್ಲೇಖಿಸದೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. “ಆ ಮನೆಯಲ್ಲಿ ನನ್ನನ್ನು ಒಬ್ಬ ಗುಲಾಮನಂತೆ ನಡೆಸಿಕೊಳ್ಳಲಾಗಿತ್ತು. ಕಳೆದ 14 ವರ್ಷಗಳಿಂದ ಎಲ್ಲವನ್ನೂ ಸಹಿಸಿಕೊಂಡು ಸುಮ್ಮನಿದ್ದೆ. ಆದರೆ ಇನ್ನು ಮುಂದೆ ಸುಮ್ಮನಿರಲು ಸಾಧ್ಯವಿಲ್ಲ. ನನ್ನ ಖಾಸಗಿ ಬದುಕಿಗೆ ಆಗಿರುವ ಹಾನಿ ಮತ್ತು ಅವಮಾನಗಳನ್ನು ಸರಿಪಡಿಸಿಕೊಂಡ ನಂತರವಷ್ಟೇ ನಾನು ಮತ್ತೆ ನಟಿಸಲು ಸಾಧ್ಯ,” ಎಂದು ಗುಡುಗಿದ್ದಾರೆ.
ಮಕ್ಕಳ ವಿಚಾರಕ್ಕೆ ಕಂಬನಿ ಮಿಡಿದ ನಟ
ಮಕ್ಕಳ ಮೇಲೆ ರವಿಗೆ ಪ್ರೀತಿಯಿಲ್ಲ ಎಂಬ ಟ್ರೋಲ್‌ಗಳಿಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, “ಮಕ್ಕಳ ಫೀಸಿಗಾಗಿ ನಾನು 90 ಲಕ್ಷ ರೂಪಾಯಿ ಕಟ್ಟುತ್ತಿದ್ದೇನೆ. ಸಣ್ಣ ಮಗನ ಜೊತೆ ಪ್ರತಿದಿನ ಚೆಸ್ ಆಟ ಆಡುತ್ತಿದ್ದೆ. ಈಗ ನನ್ನ ಮಕ್ಕಳನ್ನು ನೋಡಲೇ ಬಿಡುತ್ತಿಲ್ಲ, ಶಾಲೆಗೆ ಬಾಡಿಗಾರ್ಡ್ ಜೊತೆ ಕಳುಹಿಸುತ್ತಿದ್ದಾರೆ. ಮಕ್ಕಳ ಮೇಲೆ ಪ್ರೀತಿ ಇಲ್ಲ ಎಂದು ಹೇಳಲು ಅವರಿಗೆ ಹೇಗೆ ಮನಸ್ಸು ಬರುತ್ತದೆ?” ಎಂದು ಪ್ರಶ್ನಿಸಿ ಕಣ್ಣೀರಿಟ್ಟಿದ್ದಾರೆ.
ಗೆಳತಿ ಕೆನೀಶಾ ಬಗ್ಗೆ ಜಯಂ ರವಿ ಬೇಸರ
ಗಾಯಕಿ ಕೆನೀಶಾ ಫ್ರಾನ್ಸಿಸ್ ಅವರೊಂದಿಗೆ ಲಿಂಕ್ ಅಪ್ ಆಗಿದ್ದ ಸುದ್ದಿಯ ಬಗ್ಗೆಯೂ ಮಾತನಾಡಿದ ರವಿ, “ನನ್ನಿಂದಾಗಿ ಒಬ್ಬ ಮಹಿಳೆಯ ಬದುಕು ಹಾಳಾಯಿತು. ಸಾಮಾಜಿಕ ಜಾಲತಾಣಗಳ ನಿಂದನೆಯಿಂದಾಗಿ ಅವರು ಚೆನ್ನೈ ಬಿಟ್ಟು ಹೋಗುವಂತಾಯಿತು. ಈಗಾಗಲೇ ಒಬ್ಬರನ್ನು ನೋಯಿಸಿದ್ದೀರಿ, ಈಗಲಾದರೂ ನಿಂದಿಸುವುದನ್ನು ನಿಲ್ಲಿಸಿ,” ಎಂದು ಪದೇ ಪದೇ ವಿತಂಡವಾದದ ಪ್ರಶ್ನೆಗಳನ್ನು ಕೇಳುವ ನೆಟ್ಟಿಗರ ವಿರುದ್ಧ ಹರಿಹಾಯ್ದರು.
ಕೆನಿಶಾ ಭಾವುಕ ಸಂದೇಶ-ಅತ್ತ ಕೆನೀಶಾ ಫ್ರಾನ್ಸಿಸ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಸೆಲ್ಫಿ ಹಂಚಿಕೊಂಡು, “ವಿದಾಯ ಚೆನ್ನೈ… ಅಂದಹಾಗೆ, ಅವನು ಈಗ ಸಂಪೂರ್ಣವಾಗಿ ನಿಮ್ಮವನೇ,” ಎಂದು ಬರೆಯುವ ಮೂಲಕ ಜಯಂ ರವಿ ಜೊತೆಗಿನ ಸಂಬಂಧ ಕಡಿದುಕೊಂಡಿರುವುದನ್ನು ಪರೋಕ್ಷವಾಗಿ ಸೂಚಿಸಿದ್ದಾರೆ.
ಸಿನಿಮಾ ಜೀವನಕ್ಕೆ ಅಲ್ಪ ವಿರಾಮ!
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಜಯಂ ರವಿ, ಅಧಿಕೃತವಾಗಿ ಕಾನೂನು ಪ್ರಕ್ರಿಯೆ ಮುಗಿಯುವವರೆಗೆ ಯಾವುದೇ ಹೊಸ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ನಾನು ಸುಮ್ಮನೆ ಕೂರುವುದಿಲ್ಲ, ಮುಂದಿನ ದಿನಗಳಲ್ಲಿ ಇಡೀ ಜಗತ್ತಿಗೆ ಸತ್ಯ ಏನೆಂದು ತಿಳಿಯಲಿದೆ,” ಎಂದು ಎಚ್ಚರಿಕೆ ನೀಡಿದ್ದಾರೆ.
ಜಯಂ ರವಿಯ ಪತ್ರಿಕಾಗೋಷ್ಟಿಗೆ ಪ್ರತ್ಯುತ್ತರ ನೀಡಿದ ಆರತಿ ರವಿ!
ನಟ ಜಯಂ ರವಿ ಪತ್ನಿಯ ಮೇಲಿನ ಆರೋಪಗಳ ಸುರಿಮಳೆಯ ಪತ್ರಿಕಾಗೋಷ್ಟಿ ನಡೆದಿದ ಕೂಡಲೆ ಆರತಿ ರವಿ ತಮ್ಮ ಪೋಸ್ಟ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ.
“ನಿದ್ರಿಸುತ್ತಿರುವ ಸಿಂಹವನ್ನು ಎಂದಿಗೂ ಎಬ್ಬಿಸಬೇಡಿ. ಅದು ತಾಯಿ ಸಿಂಹವಾಗಿದ್ದರೆ ದೇವರೇ ಕಾಪಾಡಬೇಕು. ನನ್ನ ಗೌರವಯುತ ಮೌನವನ್ನು ದುರ್ಬಲತೆ ಎಂದು ತಪ್ಪಾಗಿ ಅರ್ಥೈಸಬಾರದು ಅಥವಾ ಅದನ್ನು ದುರುಪಯೋಗಪಡಿಸಿಕೊಳ್ಳಬಾರದು. ನನ್ನ ಮಕ್ಕಳ ಮತ್ತು ನನ್ನ ಗೌರವವನ್ನು ರಕ್ಷಿಸುವ ಅಗತ್ಯ ಬಂದರೆ, ನಾನು ನನ್ನ ಆರಾಮದಾಯಕ ವಲಯದಿಂದ ಹೊರಬಂದು ಸತ್ಯದೊಂದಿಗೆ ಜಗತ್ತನ್ನು ಎದುರಿಸುತ್ತೇನೆ. ಏಕೆಂದರೆ ಅಂತಿಮವಾಗಿ ಸತ್ಯವೇ ಜಯಿಸುತ್ತದೆ.” ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಜಯಂ ರವಿ ಅವರ ಇತ್ತೀಚಿನ ಪತ್ರಿಕಾಗೋಷ್ಠಿಗೆ ಪ್ರತ್ಯುತ್ತರವಾಗಿ ನೋಡಲಾಗುತ್ತಿದೆ.
#FreedomTV #JayamRavi #AarthiRavi #DivorceNews #KollywoodUpdates #KeneeshaFrancis #TamilCinema #JayamRaviPressMeet #ViralVideo #CinemaNews #FamilyDispute #ಜಯಂರವಿ #ವಿಚ್ಛೇದನ #ಸಿನಿಮಾವಾರ್ತೆ #ಚೆನ್ನೈ_ಸುದ್ದಿ




